

ಉಡುಪಿ: ಮೇಕೆದಾಟು, ಮಹದಾಯಿ ಯೋಜನೆ, ಕಳಸಾ ಬಂಡೂರಿ ಯೋಜನೆ ಜಾರಿ ಹಾಗೂ ಗ್ರೇಟರ್ ಬೆಂಗಳೂರು ವಿರೋಧಿಸಿ, ಸಮಗ್ರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಏ.26ರಂದು ರಾಜ್ಯಾದ್ಯಂತ ಮಸೀದಿ, ದೇವಸ್ಥಾನ, ಅಂಗಡಿ, ಹೋಟೆಲ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ 2 ಕೋಟಿ ಈಡುಗಾಯಿ ಒಡೆಯುವ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಿಗರಿಗೆ ಉದ್ಯೋಗ ಕಡ್ಡಾಯ ಕಾನೂನು ಸಚಿವ ಸಂಪುಟದಲ್ಲಿ ಅನುಮೋದನೆಗೊಂಡಿದ್ದರೂ ಐಟಿ, ಬಿಟಿ ಕಂಪೆನಿಗಳ ಬೆದರಿಕೆಗೆ ಮಣಿದು ಸರ್ಕಾರ ಕಾಯ್ದೆ ವಾಪಾಸು ಪಡೆದಿದೆ. ಮಂಗಳೂರಿನಲ್ಲಿಯೂ ಮಲಯಾಳಿಗಳ ಪ್ರಾಬಲ್ಯ ಹೆಚ್ಚಾಗುತ್ತಿದೆ. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಈ ಬಗ್ಗೆ ಗಡಿಭಾಗದಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಕರಾವಳಿಯಲ್ಲಿ ಸಚಿವ ಸಂಪುಟ ಸಭೆ
ದ.ಕ., ಉಡುಪಿ, ಉ.ಕ. ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ವರ್ಷಕ್ಕೊಮ್ಮೆಯಾದರೂ ಸರ್ಕಾರ ಈ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು. ಇದರಿಂದ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಶಾಸಕರ ಅಮಾನತು ಸಲ್ಲದು
ವಿಧಾನಸಭಾ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಸಮಗ್ರ ಚರ್ಚೆ ನಡೆಸಲು ಉತ್ತಮ ಅವಕಾಶವಿದೆ. ಇದನ್ನು ಆಡಳಿತ ಮತ್ತು ವಿರೋಧಪಕ್ಷಗಳು ಸುದುಪಯೋಗಿಸಿಕೊಳ್ಳಬೇಕು. ದುರಾದೃಷ್ಟವಶಾತ್ ಗದ್ದಲಗಳಿಂದ ಅಮೂಲ್ಯ ಸಮಯ ಹಾಳಾಗುತ್ತಿದೆ. ಈ ಬಾರಿಯ ಅಧಿವೇಶನದಲ್ಲಿ ಸ್ಪೀಕರ್ ವಿರೋಧ ಪಕ್ಷದ ಶಾಸಕರನ್ನು ಅಮಾನತು ಮಾಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಶಾಸಕರ ನತೆಗೆ ಕುಂದು ಉಂಟಾಗುತ್ತಿದೆ . ರಾಜ್ಯದ ಶಾಸನ ಸಭೆಗೆ ಬಹಳ ಗೌರವವಿದೆ ಎಂದರು.
ರಿಯಲ್ ಎಸ್ಟೇಟ್ ಆಗುತ್ತಿದೆ
ಚುನಾವಣೆಗಳು ರಿಯಲ್ ಎಸ್ಟೇಟ್ ವ್ಯಾಪಾರವಾಗುತ್ತಿದೆ. ಅವರೇ ಗೆಲುವು ಸಾಧಿಸುತ್ತಿದ್ದಾರೆ. ವಿಧಾನ ಪರಿಷತ್ಗೆ 3 ಜನರನ್ನು ನಾಮಕರಣ ಮಾಡಲು ಸರ್ಕಾರಕ್ಕೆ ಅವಕಾಶವಿದೆ. ಸಾಧಕರ ಬದಲು ರಾಜಕೀಯ ನಾಯಕರನ್ನೇ ಆಯ್ಕೆ ಮಾಡುತ್ತಿರುವುದು ದುರದೃಷ್ಟಕರ ಎಂದರು.
ಕಾಂತಾರದ ಗೌರವ ಶಿವಾಜಿಯಲ್ಲಿ ಹೋಯಿತು
ನಟ ರಿಷಭ್ ಶೆಟ್ಟಿ ಅವರು ಕಾಂತಾರ ಸಿನೆಮಾದಲ್ಲಿ ಗಳಿಸಿದ ಗೌರ ಶಿವಾಜಿ ಸಿನೆಮಾದಿಂದ ಹೊರಟು ಹೋಗಿದೆ. ನಮ್ಮ ರಾಜ್ಯದಲ್ಲೇ ಅನೇಕ ಮಂದಿ ಮಹನೀಯರಿದ್ದು, ಅವರ ಸಿನೆಮಾ ಮಾಡಬಹುದಿತ್ತು ಎಂದು ವಾಟಾಳ್ ಹೇಳಿದರು. ವಾಟಾಳ್ ಪಕ್ಷದ ಮುಖಂಡ ಚಂದನ್ ವಾಟಾಳ್ ಉಪಸ್ಥಿತರಿದ್ದರು.