ವಾಟಾಳ್, ಗೋವಿಂದು ಬಂಧನ, ಬಿಡುಗಡೆ

27 Jaggu3-Web
ಮರಾಠಾ ನಿಗಮ ಸ್ಥಾಪನೆ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿ ಹೆದ್ದಾರಿ ಸಂಚಾರ ತಡೆಯಲು ಮುಂದಾದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಅವರನ್ನು ಪೊಲೀಸರು ವಶಕ್ಕೆ ಪಡೆದರು.
Published on

ಬೆಳಗಾವಿ: ಮರಾಠಾ ನಿಗಮ ಸ್ಥಾಪನೆ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆಯಲು ಮುಂದಾದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಟಾಳ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳು ಬೆಳಗಾವಿ ಹೊರವಲಯದ ಸುವರ್ಣಸೌಧದ ಎದುರು ಶುಕ್ರವಾರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದವು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ವಾಟಾಳ್ ಹಾಗೂ ಸಾ.ರಾ. ಗೋವಿಂದು ಇದ್ದ ಕಾರನ್ನು ಹಿರೇಬಾಗೇವಾಡಿ ಟೋಲ್ ಬಳಿ ಪೊಲೀಸರು ತಡೆದರು. ಪೊಲೀಸರ ಕ್ರಮ ಖಂಡಿಸಿ ವಾಟಾಳ್, ಗೋವಿಂದು ಹಾಗೂ ಕಾರ್ಯಕರ್ತರು ಟೋಲ್ ಬಳಿ ಮಲಗಿ ಹೆದ್ದಾರಿ ತಡೆಯಲು ಮುಂದಾದರು.

ಈ ವೇಳೆ ಪೊಲೀಸರು 25ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದರು. ಇದರಿಂದ ವಾಟಾಳ್ ನಾಗರಾಜ ಹಾಗೂ ಕನ್ನಡ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸ್ ವಾಹನದಲ್ಲಿ ಎಲ್ಲರನ್ನು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net