ಮೈಸೂರು: ವಿದ್ಯಾರಣ್ಯಪುರಂನ ವಾಸುದೇವ ಮಹಾರಾಜ್ ಫೌಂಡೇಷನ್‌ನಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ವಾಸುದೇವ ಮಹಾರಾಜ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕ ಡಾ.ವಿ. ಭಾನುಪ್ರಕಾಶ್ ಶರ್ಮ ಹಾಗೂ ಕರುಣಾಮಯಿ ವಿಶೇಷ ಚೇತನರ ಸಂಸ್ಥೆ ಗೌರವಾಧ್ಯಕ್ಷ ಎನ್. ಶ್ರೀಧರ್ ದೀಕ್ಷಿತ್ ಅವರು ಪ್ರಶಸ್ತಿ ಸ್ವೀಕರಿಸಿದರು.
ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, 1938ರಲ್ಲಿ ಜನಿಸಿದ ವಾಸುದೇವ ಮಹಾರಾಜ್ ಅವರು ಅಂದಿನ ಪ್ರತಿಷ್ಠಿತ ಎಸ್‌ಬಿಎಂನಲ್ಲಿ ಕೆಲಸ ಮಾಡುತ್ತಿದ್ದರೂ ಮೊದಲಿನಿಂದಲೂ ಅವರಿಗೆ ಆಧ್ಯಾತ್ಮದ ಗೀಳು ಇತ್ತು. ನಂತರ ಸಾಧನೆಯ ತುತ್ತ ತುದಿ ಏರಿದರು. ಇವರಿಂದ ಅನೇಕರು ಪ್ರಭಾವಿತರಾದರು ಎಂದು ಸ್ಮರಿಸಿದರು.
ಪ್ರಶಸ್ತಿ ಪುರಸ್ಕೃತ ಡಾ. ಭಾನುಪ್ರಕಾಶ್ ಶರ್ಮ ಮಾತನಾಡಿ, ಮನುಷ್ಯ ಜಗತ್ತಿನಲ್ಲಿ ಏನು ಸಾಧನೆ ಮಾಡಿದ್ದಾನೆ ಎಂಬುದನ್ನು ನೆನಪಿಸಿಕೊಳ್ಳುವುದೇ ಈ ರೀತಿಯ ಕಾರ್ಯಕ್ರಮಗಳ ಉದ್ದೇಶವಾಗಿವೆ. ಇನ್ನು, ವಾಸುದೇವ ಮಹಾರಾಜರು ಜೀವನದಲ್ಲಿ ಆದರ್ಶ ಪ್ರಾಯರಾಗಿ ಇತರರಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಮಾಜ ಸೇವಕ ಕೆ. ರಘುರಾಮ್ ವಾಜಪೇಯಿ, ಮುಖಂಡರಾದ ಗುರುರಾಜ, ಕೆ.ಆರ್. ಯೋಗಾನರಸಿಂಹನ್, ಎಂ.ವಿ. ನಾಗೇಂದ್ರ ಬಾಬು, ಎನ್. ಅನಂತ ಇತರರು ಇದ್ದರು.