

ವಿಜಯಪುರ: ಪುರಸಭೆಯಿಂದ ನಿರ್ಮಿಸಲು ಹೊರಟ ಸಾರ್ವಜನಿಕ ಶೌಚಗೃಹಕ್ಕೆ ವಾಸ್ತು ದೋಷ ಎದುರಾಗಿದೆ.
ಹೌದು,ಪಟ್ಟಣದ ಸರ್ಕಾರಿ ಕಿರಿಯ ಕಾಲೇಜಿನ ಆಟದ ಮೈದಾನದಲ್ಲಿ ಶೌಚಗೃಹ ನಿರ್ಮಾಣಕ್ಕೆ ಅಡಿಪಾಯ ಹಾಕಿದ ನಂತರ ವಾಸ್ತು ಸರಿಯಿಲ್ಲ ಎಂಬ ನೆಪ ಹೇಳಿ ಕಾಮಗಾರಿ ನಿಲ್ಲಿಸಲಾಗಿದೆ.
ಪಟ್ಟಣದಲ್ಲಿ ಏಳು ತಿಂಗಳಿಂದ ಚುನಾಯಿತ ಅಧ್ಯಕ್ಷರು ಇಲ್ಲದೆ ಸಾಮಾನ್ಯ ಸಭೆ ನಡೆದಿಲ್ಲ, ಅಧಿಕಾರಿಗಳೇ ಯಾವುದೋ ಮಾತುಗಳನ್ನು ಹೇಳಿ ಸರ್ಕಾರಿ ಕಿರಿಯ ಕಾಲೇಜಿನ ಆಟದ ಮೈದಾನದಲ್ಲಿ ಶೌಚಗೃಹ ನಿರ್ಮಿಸಲು ಹೋಗಿ ಈಗ ವಾಸ್ತು ಸರಿ ಇಲ್ಲವೆಂಬ ಕಾರಣಕ್ಕೆ ಮಧ್ಯದಲ್ಲಿಯೇ ಕಾಮಗಾರಿ ನಿಲ್ಲಿಸಿದ್ದಾರೆ, ಟೆಂಡರ್ ಆಗಿ ಗುತ್ತಿಗೆದಾರರು ಸಂಪೂರ್ಣ ಪಾಯ ಹಾಕಿದ ನಂತರ ಕೆಲ ಸದಸ್ಯರು ಅದು ದೇವಮೂಲೆಯಾಗಿದ್ದು, ವಾಸ್ತು ಪ್ರಕಾರ ಅಲ್ಲಿ ಶೌಚಗೃಹ ನಿರ್ಮಿಸಬಾರದೆಂದು ತಕರಾರು ತೆಗೆದ ಕಾರಣ ಕೆಲಸ ಸ್ಥಗಿತವಾಗಿದೆ.
ಶೌಚಗೃಹ ನಿರ್ಮಾಣಕ್ಕೆ ಅನುಮತಿ ಕೋರಿ ಪುರಸಭೆಯವರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದು, ಅದಕ್ಕೆ ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಕಾಲೇಜಿನವರು ಪುರಸಭೆಗೆ ಬರವಣಿಗೆಯಲ್ಲಿ ಉತ್ತರಿಸಿದ್ದರು. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದೆ ಶೌಚಗೃಹ ನಿರ್ಮಿಸಲು ಹೊರಟ ಪುರಸಭೆಗೆ ಈಗ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
"ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಬೆಳಗ್ಗೆ ಹಾಗೂ ಸಂಜೆ ಹಿರಿಯರು ವಿಹಾರಕ್ಕೆ ಬರುತ್ತಾರೆ. ಅವರಿಗೆ ಶೌಚಗೃಹದ ಅವಶ್ಯಕತೆ ಇದ್ದು, ಈಗ ನಿರ್ಮಿಸುತ್ತಿರುವ ಶೌಚಗೃಹ ಪೂರ್ಣಗೊಳಿಸಬೇಕು. ಸರ್ಕಾರಿ ಕಟ್ಟಡಗಳಿಗೆ ಯಾವುದೇ ವಾಸ್ತುದೋಷ ಇರುವುದಿಲ್ಲ. ವಾಸ್ತುದೋಷವಿದ್ದರೆ ಅಲ್ಲಿ ಸ್ಟೇಡಿಯಂ ನಿರ್ಮಿಸಲೂ ಸಾಧ್ಯವಿಲ್ಲ, ಕೂಡಲೇ ಅರ್ಧದಲ್ಲಿ ನಿಂತಿರುವ ಕಾಮಗಾರಿ ಪೂರ್ಣಗೊಳಿಸಬೇಕು."
ಜೆ.ಎನ್.ಶ್ರೀನಿವಾಸ್
ಪುರಸಭಾ ಮಾಜಿ ಉಪಾಧ್ಯಕ್ಷ