ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆ.11ರಿಂದ 20ರವರೆಗೆ ನಗರದ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ‘ವಸ್ತ್ರ ಉತ್ಸವ’ ಶೀರ್ಷಿಕೆಯಡಿ ಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.
ನೇಕಾರರು, ನೇಕಾರ ಸಹಕಾರ ಸಂಘಗಳು ತಯಾರು ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಮತ್ತು ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೋಗಲು ಈ ಮೇಳ ಆಯೋಜನೆ ಮಾಡಲಾಗಿದೆ. ಕೈಮಗ್ಗ ನೇಕಾರರು ಮತ್ತು ಕರಕುಶಲಕರ್ಮಿಗಳು ತಾವು ತಯಾರು ಮಾಡಿದ ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ದೇಶದ 75ಕ್ಕೂ ಹೆಚ್ಚು ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸಿರುವ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಗೊಳ್ಳುತ್ತಿವೆ ಎಂದು ಜೆಎಸ್‌ಎಸ್ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ರೇಷ್ಮೆ ಸೀರೆ, ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ, ಕಸೂತಿ ಸೀರೆ, ತಮಿಳುನಾಡಿನ ಹರಿಶುದ್ಧ ಕಾಂಜಿವರಂ ಸೀರೆ, ಕೇರಳದ ಕೈಮಗ್ಗ ಉತ್ಪನ್ನಗಳು, ಬಿಹಾರ್ ತಸ್ಸರ್ ಸೀರೆ, ಪಶ್ಚಿಮ ಬಂಗಾಳದ ಕಾಂತಾ ಸೀರೆ, ಬಲಚುರಿ ಸೀರೆ, ಭುಟಿಕ್ ಸೀರೆ, ಕಾಟನ್ ಸೀರೆಗಳು ಮೊದಲಾದವು ಇರಲಿವೆ ಎಂದರು.
ಮೇಳವನ್ನು ಆ.11ರಂದು ಸಂಜೆ 4 ಗಂಟೆಗೆ ಶಾಸಕ ಟಿ.ಎಸ್.ಶ್ರೀವತ್ಸ ಉದ್ಘಾಟಿಸುವರು. ನಿತ್ಯ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ಮೇಳ ತೆರೆದಿರಲಿದೆ ಎಂದರು.
ಯೋಜನಾ ನಿರ್ದೇಶಕ ಎಂ.ಶಿವನಂಜಸ್ವಾಮಿ, ಸಂಯೋಜಕ ರಾಕೇಶ್ ರೈ ಇದ್ದರು.