ವಾಸಿಲ್ ಅಲಿಖಾನ್ ಚನ್ನಪಟ್ಟಣ ನಗರಸಭೆ ಅಧ್ಯಕ್ಷ

img_3319-1.jpg
Published on

ಚನ್ನಪಟ್ಟಣ

ಚನ್ನಪಟ್ಟಣ ನಗರಸಭೆಯ ನೂತನ ಅಧ್ಯಕ್ಷರಾಗಿ ವಾಸಿಲ್ ಆಲಿಖಾನ್ ಹಾಗೂ ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ‌ ನಗರಸಭೆ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಪಾಲಾಯಿತು.

31 ಸದಸ್ಯಬಲದ ಚನ್ನಪಟ್ಟಣ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ ಚುನಾವಣೆ ನಿಗಧಿಯಾಗಿತ್ತು. ಈ ಸ್ಥಾನಗಳಿಗೆ ಈ ಇಬ್ಬರನ್ನು ಹೊರತುಪಡಿಸಿ, ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ, ಚುನಾವಣಾಧಿಕಾರಿಯಾದ ಜಿಲ್ಲಾ ಉಪ ವಿಭಾಗಾಧಿಕಾರಿ ಬಿನೋಯ್ ಇವರುಗಳ ಅವಿರೋಧ ಆಯ್ಕೆಯನ್ನು ಘೋಷಿಸಿದರು.

31 ಸದಸ್ಯಬಲದ ನಗರಸಭೆಯಲ್ಲಿ ಈ ಹಿಂದೆ ಜೆಡಿಎಸ್ ನಿಂದ 16, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ 7 ಹಾಗೂ ಒರ್ವ ಪಕ್ಷೇತ್ತರ ಸದಸ್ಯೆ ಆಯ್ಕೆಯಾಗಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ನಡೆದ ರಾಜಕೀಯ ಬದಲಾವಣೆಯಲ್ಲಿ ಹಲವಾರು ಸದಸ್ಯರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಕಾಂಗ್ರೆಸ್ ಬಲ ಹೆಚ್ಚಿತು. ಈ ಕಾರಣದಿಂದ ಆಡಳಿತ ಚುಕ್ಕಾಣಿ ಕಾಂಗ್ರೆಸ್ ‌ಪಾಲಿಗೆ‌ ನಿರಾದಶಾಯಕವಾಗಿ ಒಲಿಯಿತು.

ಹಿರಿತನಕ್ಕೆ ಮಣೆ!!

ಅಧ್ಯಕ್ಷ ಸ್ಥಾನ ಬಿಸಿಎ ( ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದು, ಈ ಸ್ಥಾನಕ್ಕೆ ಬರೋಬರಿ 12 ಮಂದಿ ಅಕಾಂಕ್ಷಿತರಿದ್ದರು. ಮೂಲ ಹಾಗೂ ವಲಸಿಗ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯ ಕಸರತ್ತು ಸಹ ನಡೆಸಿದ್ದರು. ಈ ಮಧ್ಯೆ ಸದಸ್ಯರ ಸಭೆ ನಡೆಸಿದ್ದ ಕಾಂಗ್ರೆಸ್ ವರಿಷ್ಠರು ಯಾವುದೇ ಗೊಂದಲ ಹಾಗೂ ಬಣ ರಾಜಕೀಯಕ್ಕೆ ಅವಕಾಶವಾಗದಂತೆ ಎಚ್ಚರವಹಿಸಿದ್ದರು. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಸೂಚಿಸಿದರು. ಅದರಂತೆ, ಕಾಂಗ್ರೆಸ್ ನಾಯಕರು ಹಿರಿತನಕ್ಕೆ ಮನ್ನಣೆ ನೀಡಿದ್ದು, ಹಿರಿಯ ಸದಸ್ಯ ವಾಸಿಲ್ ಆಲಿಖಾನ್ ಅಧ್ಯಕ್ಷ ಸ್ಥಾನ ಅಲಂಕರಿಸುವಂತಾಯಿತು. ವಾಸಿಲ್ ಮೂರನೇ ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ಒಮ್ಮೆ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚಿಗೆ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ವಲಸೆ ಬಂದಿದ್ದ ೧೪ ನೇ ವಾರ್ಡ್ ನ ಶ್ರೀನಿವಾಸಮೂರ್ತಿ ಗೆ ಮಣೆ ಹಾಕಿದ್ದು ವಿಶೇಷ.

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ!!

ನಗರಸಭೆ ಅಧಿಕಾರ ಕಾಂಗ್ರೆಸ್ ವಶವಾಗುತ್ತಲೇ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಪಟ್ಟರು. ಈ‌ ಹಿಂದೆ ನಗರಸಭೆ ಚುನಾವಣೆ ನಡೆದ್ದಾಗ ಕೇವಲ ಏಳು ಸದಸ್ಯರು ಮಾತ್ರ ಕಾಂಗ್ರೆಸ್ ನಿಂದ ಚುನಾಯಿತರಾಗಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಸಂಪೂರ್ಣ ಬಹುಮತದೊಂದಿಗೆ ತಮ್ಮ ಪಕ್ಷದ ಸದಸ್ಯರು‌ ಅಧಿಕಾರದ ಚುಕ್ಕಾಣಿ ಹಿಡಿದದ್ದು ಕಾಂಗ್ರೆಸ್ ವಲಯದ ಸಂಭ್ರಮಕ್ಕೆ ಕಾರಣವಾಯಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಶಾಸಕ ಸಿ.ಪಿ‌.ಯೋಗೇಶ್ವರ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಪೌರಾಯುಕ್ತ ಮಹೇಂದ್ರ, ಬ್ಲಾಕ್ ಅಧ್ಯಕ್ಷರುಗಳಾದ ಎಸ್.ಆರ್‌.ಪ್ರಮೋದ್, ಸುನೀಲ್ ಮುಖಂಡರಾದ ಎಸ್.ಲಿಂಗೇಶ್ ಕುಮಾರ್, ಎಂ.ಎ.ಕರುಣ್ ಸೇರಿದಂತೆ ಹಲವಾರು ಮುಖಂಡರು ಹಾಗೂ ನಗರಸಭಾ ಸದಸ್ಯರು ಅಭಿನಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net