ನವರಾತ್ರಿ ಅಂಗವಾಗಿ ವಿಶೇಷ ಪೂಜೆ

vasavi
Published on

ಕುಶಾಲನಗರ:

ಭೂಮಿಯ ಮೇಲೆ ದುಷ್ಟ ಶಕ್ತಿಗಳು ವಿಜೃಂಭಿಸಿದಾ ಸಂಹಾರಕ್ಕಾಗಿ ಭೂಮಿಗೆ ದೇವಿ ಆಗಮಿಸುತ್ತಾಳೆ ಎನ್ನುವುದು ಆಸ್ತಿಕರ ನಂಬಿಕೆ ಎಂದು ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಭಟ್ ಹೇಳಿದರು. ನವರಾತ್ರಿ ಹಬ್ಬದ ವಿಶೇಷವಾಗಿ ಇಲ್ಲಿನ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾದಲ್ಲಿ ಮುಂದಿನ 11 ದಿನಗಳ ಕಾಲ ನಡೆಯುವ ವಿಶೇಷ ಪೂಜೆಯನ್ನು ನೆರವೇರಿಸಿ ಸೋಮವಾರ ಮಾತನಾಡಿದರು.

ವಿಶ್ವದ ನಾನಾ ಭಾಗಗಳಲ್ಲಿ ಯುದ್ಧ ಭೀತಿ ಆವರಿಸಿಕೊಂಡಿದೆ. ಪುರಾತನ ಕಾಲದಲ್ಲಿ ಇಂತಹವುದೇ ಸಂದರ್ಭ ನಿರ್ಮಾಣವಾದಾಗ ದೇವಾನು ದೇವತೆಗಳು ರಾಕ್ಷಸರ ಸಂಹಾರಕ್ಕೆ ಮುಂದಾಗುತ್ತಿದ್ದರು. ಈಗ ಅಂತಹುದೇ ಸ್ಥಿತಿ ಈಗ ಇರುವುದರಿಂದ ಮತ್ತೊಮ್ಮೆ ದೇವಾನುದೇವತೆಗಳು ಇಲ್ಲಿಗೆ ಆಗಮಿಸಬೇಕಾಗಿದೆ.

ದೇವರುಗಳು ಮತ್ತೊಮ್ಮೆ ಭುವಿಗೆ ಆಗಮಿಸಿ ಎಲ್ಲ ತರಹದ ದುಷ್ಟ ಶಕ್ತಿಗಳ ಸಂಹಾರ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲರೂ ದೃಢ ಸಂಕಲ್ಪ ಮಾಡಬೇಕು. ಈ ನವರಾತ್ರಿ ಮೂಲಕ ಸರ್ವೇ ಜನಾಃ ಸುಖಿನೋ ಭವಂತು ಎನ್ನುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ನಮ್ಮ ದೇವಸ್ಥಾನದಲ್ಲಿ ನವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ 9 ದಿನದ ಬದಲಿಗೆ 11 ದಿನಗಳು ಬಂದಿದೆ. 11 ದಿನವೂ ವಾಸವಿ ಮಾತೆಗೆ ವಿವಿಧ ರೀತಿಯ ಅಲಂಕಾರ ಮಾಡಲಾಗುತ್ತದೆ. ಆ ಮೂಲಕ ವಿಶ್ವ ಶಾಂತಿಃಗಾಗಿ ಪ್ರಾರ್ಥನೆ ಮಾಡುತ್ತೇವೆ ಎಂದು ತಿಳಿಸಿದರು.

ನವರಾತ್ರಿ ವಿಶೇಷ ದಿನದ ಪೂಜಾ ಸೇವಾರ್ಥವನ್ನು ಕೆ.ಎಸ್.ನಾಗೇಶ್ ಕುಟುಂಬಸ್ಥರು ನೆರವೇರಿಸಿದರು. ನವರಾತ್ರಿ ಅಂಗವಾಗಿ ಕನ್ನಿಕಾಪರಮೇಶ್ವರಿ ದೇವಸ್ಥಾದಲ್ಲಿ ಗೊಂಬೆಗಳನ್ನು ಇಟ್ಟಿರುವುದು ಆಕರ್ಷಕವಾಗಿದೆ. ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷ ಬಿ.ಎಲ್.ಅಶೋಕ್ ಕುಮಾರ್, ನಿರ್ದೇಶಕರಾದ ಕುಮಾರ್, ಪಿ.ಎಸ್.ಪ್ರಶಾಂತ್, ಕೃಷ್ಣಮೂರ್ತಿ, ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವತಿಯರ ಸಂಘದ ಅಧ್ಯಕ್ಷೆ ಅನುಷಾ ಅರ್ಜುನ್, ವಾಸವಿ ದೀಕ್ಷಾ ಸಮಿತಿಯ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ, ಹಿರಿಯರಾದ ಕೆ.ಜೆ.ನಾಗೇಂದ್ರ ಗುಪ್ತ, ವಸಂತ ಕುಮಾರ್, ಲಕ್ಷ್ಮೀ ನರಸಮ್ಮ, ಸುವರ್ಣಮ್ಮ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net