

ವಿಜಯವಾಣಿ ಸುದ್ದಿಜಾಲ ಗದಗ
ಗದಗ -ಬೆಟಗೇರಿ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿದ್ದ ರಾಜೀವ್ ಗಾಂಧಿ ವಸತಿ ನಿಗಮದಿಂದ ಕೈಗೊಂಡಿದ್ದ 3630 ಮನೆಗಳ ವಸತಿ ಸಮುಚ್ಚಯ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಯೋಜನೆಯಡಿಯಲ್ಲಿ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿಸಿ ಬ್ಯಾಂಕ್ ಸಾಲ ಪಡೆಯಲು ಒಪ್ಪಿಗೆ ಪತ್ರ ಕೊಟ್ಟು ಸಾಲ ಮಂಜೂರಾದ ಬಳಿಕ ಮನೆ ಹಂಚಿಕೆ ಮಾಡಲು ನಿರ್ಧಾರ ಮಾಡಲಾಗಿದೆ.
ವಿಧಾನ ಸೌಧದಲ್ಲಿ ಶುಕ್ರವಾರ ಗದಗ ಹಾಗೂ ರೋಣ ವಿಧಾನ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಹಾಗೂ ಗದಗ ಶಾಸಕರೂ ಆದ ಎಚ್. ಕೆ. ಪಾಟೀಲ್ ಅವರ ಜತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ನಡೆಸಿದ ಸಭೆಯಲ್ಲಿ ಮೊದಲ ಹಂತದಲ್ಲಿ 1008 ಮನೆ ಪೂರ್ಣಗೊಳಿಸಲು ಅಗತ್ಯವಾದ ಆರ್ಥಿಕ ನೆರವು ಒದಗಿಸಲು ತೀರ್ಮಾನಿಸಲಾಯಿತು.
ಒಂದೊಮ್ಮೆ ಯಾರಾದರೂ ಫಲಾನುಭವಿಗಳು ವಂತಿಗೆ ಪಾವತಿಸಿ ಬ್ಯಾಂಕ್ ಸಾಲ ಕ್ಕೆ ಒಪ್ಪಿಗೆ ನೀಡದಿದ್ದರೆ ಅವರನ್ನು ಬಿಟ್ಟು ಇತರೆ ಅರ್ಹ ಫಲಾನುಭವಿಗಳ ಆಯ್ಕೆಗೂ ನಿರ್ಧಾರ ಮಾಡಲಾಯಿತು.
ಮೊದಲ ಹಂತದ ವಸತಿ ಸಮುಚ್ಚಯದಲ್ಲಿ 1008 ಪೈಕಿ 252 ಮನೆ ಈಗಾಗಲೇ ಹಂಚಿಕೆ ಆಗಿದ್ದು ಅವರ ಬಳಿಯೂ ವಂತಿಗೆ ಪಡೆದು ಬ್ಯಾಂಕ್ ಸಾಲಕ್ಕೆ ಒಪ್ಪಿಗೆ ಕಡ್ಡಾಯವಾಗಿ ಪಡೆಯಬೇಕು. ಉಳಿದ ಮನೆಗಳ ಬಾಕಿ ಇರುವ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಿ ವಂತಿಗೆ, ಬ್ಯಾಂಕ್ ಸಾಲದ ಮೊತ್ತ ಬಂದ ನಂತರವಷ್ಟೇ ಮನೆ ಕೀಲಿ ಕೊಡಬೇಕು ಎಂದು ಸೂಚನೆ ನೀಡಲಾಯಿತು.
ಇದಾದ ತಕ್ಷಣ ಎರಡನೇ ಹಂತದ 2622 ಮನೆಗಳ ವಸತಿ ಸಮುಚ್ಚಯ ನಿರ್ಮಾಣಪೂರ್ಣ ಗೊಳಿಸಲು ತ್ವರಿತ ಕ್ರಮ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಲು ನಿರ್ಧರಿಸಲಾಯಿತು.
ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾ ಧಿಕಾರಿ ವೈಶಾಲಿ, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಮ್ಮ ಉಪಸ್ಥಿತರಿದ್ದರು.