ಅಧ್ಯಕ್ಷ ಸ್ಥಾನಕ್ಕೆ ವಸಂತ್‌ಕುಮಾರ್ ಹಾದಿ ಸುಗಮ

06 TKE 1
ಪುರಸಭೆ ಕಾರ್ಯಾಲಯ
Published on

ತರೀಕೆರೆ: ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಿಸಿದ್ದು, ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನ ಎಸ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ ಮಹಿಳೆಗೆ ನಿಗದಿಯಾಗಿದೆ.
ಪುರಸಭೆ ಇತಿಹಾಸದಲ್ಲೇ ಮೊದಲ ಬಾರಿ ಎಸ್ಟಿಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ 15ನೇ ವಾರ್ಡ್‌ನ ಏಕೈಕ ಸದಸ್ಯ ವಸಂತ್‌ಕುಮಾರ್‌ಗೆ ಅದೃಷ್ಟ ಒಲಿದು ಬಂದಿದ್ದು, ಬಿಸಿಎಂ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯಲಿದೆ.
23 ವಾರ್ಡ್‌ಗಳನ್ನು ಹೊಂದಿರುವ ಪುರಸಭೆಯಲ್ಲಿ 21 ಕಾಂಗ್ರೆಸ್ ಬೆಂಬಲಿತ, ಒರ್ವ ಬಿಜೆಪಿ, ಒರ್ವ ಪಕ್ಷೇತರ ಸದಸ್ಯರಿದ್ದಾರೆ. ಮೊದಲ ಅವಧಿಗೆ ನಿಗದಿಯಾಗಿದ್ದ ಎಸ್ಸಿ ಅಧ್ಯಕ್ಷ ಗಾದಿಗೆ 3ನೇ ವಾಡ್‌ನ ಸದಸ್ಯ ಟಿ.ಎಂ.ರಂಗನಾಥ್, 12ನೇ ವಾರ್ಡ್‌ನ ಕಮಲ ಹಾಗೂ 13ನೇ ವಾರ್ಡ್‌ನ ಪರಮೇಶ ಅಧಿಕಾರ ಚಲಾಯಿಸಿದರೆ, 1ನೇ ವಾರ್ಡ್‌ನ ಸದಸ್ಯೆ ರಿಹಾನ ಪರ್ವಿನ್, 8ನೇ ವಾರ್ಡ್‌ನ ಸದಸ್ಯೆ ಯಶೋಧಮ್ಮ, ಆರ್.ದಿವ್ಯ ಮೊದಲ ಅವಧಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನವನ್ನು ಒಪ್ಪಂದದಂತೆ ಹಂಚಿಕೊಂಡು ಅಧಿಕಾರ ಅನುಭವಿಸಿದ್ದಾರೆ.
ಇದೀಗ ಎರಡನೇ ಅವಧಿಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ 15ನೇ ವಾರ್ಡ್‌ನ ಸದಸ್ಯ ವಸಂತ್‌ಕುಮಾರ್ ಒಬ್ಬರೇ ಅರ್ಹತೆ ಪಡೆದುಕೊಂಡಿದ್ದು, ಅವರು ಗದ್ದುಗೆ ಏರುವ ಹಾದಿ ಸುಗಮವಾಗಿದೆ. ಇನ್ನುಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಪಾರ್ವತಮ್ಮ, ಎಂ.ಗಿರಿಜಾ, ಆರ್.ವಸಂತ, ಶಮೀಮ್ ಬಾನು ಹಾಗೂ ಟಿ.ಆರ್.ಗೀತಾ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದ್ದು, ಕಾಂಗ್ರೆಸ್ ಪ್ರಮುಖರು ಇವರ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net