ತರೀಕೆರೆ ಪುರಸಭೆಗೆ ವಸಂತ್‌ಕುಮಾರ್ ಅಧ್ಯಕ್ಷ

20 TKE 2,2
Published on

ತರೀಕೆರೆ: ಪುರಸಭೆ ನೂತನ ಅಧ್ಯಕ್ಷರಾಗಿ 15ನೇ ವಾರ್ಡ್‌ನ ಎಸ್ಟಿ ಸದಸ್ಯ ವಸಂತ್‌ಕುಮಾರ್, ಉಪಾಧ್ಯಕ್ಷರಾಗಿ 20ನೇ ವಾರ್ಡ್‌ನ ಸಾಮಾನ್ಯ ಸದಸ್ಯೆ ಎಂ.ಗಿರಿಜಾ ಅವಿರೋಧ ಆಯ್ಕೆಯಾದರು.
ಒಟ್ಟು 23 ಸದಸ್ಯ ಬಲದ ಪುರಸಭೆಯ ಎರಡನೇ ಅವಧಿಗೆ ಮಂಗಳವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಸರ್ಕಾರ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ವಸಂತ್‌ಕುಮಾರ್, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಗಿರಿಜಾ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ತಹಸೀಲ್ದಾರ್ ವಿ.ಎಸ್.ರಾಜೀವ್ ಅಧ್ಯಕ್ಷ , ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಿದರು.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 30 ಕೋಟಿ ರೂ. ಬಿಡುಗಡೆಯಾಗಿದ್ದು, ಮಳೆ ನಿಂತ ನಂತರ ಕಾಮಗಾರಿ ಆರಂಭಿಸಲಾಗುವುದು. ಪಟ್ಟಣ ವ್ಯಾಪ್ತಿಯ ಕೆರೆಗಳು ಹಾಗೂ ಉದ್ಯಾನವನ ಪುನಶ್ಚೇತನಕ್ಕೆ 5 ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಫುಡ್‌ಕೋರ್ಟ್ ನಿರ್ಮಿಸಲಾಗುವುದು ಎಂದರು.
ತಾಲೂಕು ಪಂಚಾಯಿತಿ, ಮಹಾತ್ಮ ಗಾಂಧಿ ವತ್ತ, ಸುತ್ತಮುತ್ತಲ ಪ್ರದೇಶದಲ್ಲಿ ಇಂಟರ್‌ಲಾಕ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಪುರಸಭೆ ಇತಿಹಾಸದಲ್ಲಿ ಎಸ್ಟಿ ಸಮುದಾಯದವರಿಗೆ ಇದೇ ಮೊದಲು ಅಧ್ಯಕ್ಷ ಸ್ಥಾನ ಲಭಿಸಿದೆ. ಸಂವಿಧಾನದ ಜತೆ ಸರ್ವ ಸದಸ್ಯರ ಸಹಕಾರದಿಂದ ಸಿಕ್ಕ ಅಧಿಕಾರವನ್ನು ಜನರ ಸಮಸ್ಯೆ ಪರಿಹಾರ, ಪಟ್ಟಣದ ಸ್ವಚ್ಛತೆ, ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದರು.
ನೂತನ ಅಧ್ಯಕ್ಷ ವಸಂತ್‌ಕುಮಾರ್ ಮಾತನಾಡಿ, ಅನಿರೀಕ್ಷಿತವಾಗಿ ಲಭಿಸಿದ ಸ್ಥಾನಕ್ಕೆ ನ್ಯಾಯ ಸಿಗುವಂತೆ ಕಾರ್ಯನಿರ್ವಹಿಸಲಾಗುವುದು ಎಂದರು.
ಉಪಾಧ್ಯಕ್ಷೆ ಎಂ.ಗಿರಿಜಾ ಮಾತನಾಡಿ, ಸರ್ವ ಸದಸ್ಯರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುವ ಜತೆಗೆ ಎಲ್ಲರ ಸಹಕಾರ ಪಡೆದು ಪಟ್ಟಣದ ಪ್ರಗತಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಾರೂಕ್, ನಗರ ಘಟಕ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ, ಟಿ.ಎಸ್.ರಮೇಶ್, ಸದಸ್ಯರಾದ ಟಿ.ಜಿ.ಶಶಾಂಕ್, ಟಿ.ಎಂ.ಭೋಜರಾಜ್, ಟಿ.ದಾದಾಪೀರ್, ಟಿ.ಜಿ.ಲೋಕೇಶ್, ಆರ್.ಚಂದ್ರಶೇಖರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net