ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಸ್ವರ್ಣ ಜನ್ಮ ಜಯಂತಿ, 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಸಂಕಲ್ಪ

h6-Gunadhar-nandi-maharaj-1.jpg
Published on

ಹುಬ್ಬಳ್ಳಿ: ತಾಲೂಕಿನ ವರೂರ ನವಗ್ರಹ ತೀರ್ಥ ಕ್ಷೇತ್ರದ ಪ್ರವರ್ತಕ, ರಾಷ್ಟ್ರಸಂತ, ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು 50ನೇ ಜನ್ಮ ವರ್ಷಕ್ಕೆ ಪದಾರ್ಪಣೆ ಮಾಡಲಿರುವ ಪ್ರಯುಕ್ತ ಅವರ ಸುವರ್ಣ ಜನ್ಮ ಜಯಂತಿಯನ್ನು ಸೆಪ್ಟೆಂಬರ್ 18ರಿಂದ ಮೂರು ದಿನಗಳವರೆಗೆ ವೈವಿಧ್ಯಮಯ ಸಮಾಜಹಿತ ಕಾರ್ಯಕ್ರಮಗಳೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ.

ನವಗ್ರಹ ತೀರ್ಥ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಹುಬ್ಬಳ್ಳಿ& ಧಾರವಾಡ, ಬೆಳಗಾವಿ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ ಇತರ ಜಿಲ್ಲೆಗಳ ಜೈನ ಸಮಾಜ ಪ್ರಮುಖರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದವರು, ವಿದ್ಯಾಥಿರ್ಗಳು ಜನ್ಮ ಜಯಂತಿ ಆಚರಣೆಗೆ ಆಚಾರ್ಯ ಶ್ರೀಗಳನ್ನು ಆಗ್ರಹಿಸಿ ಅನುಮತಿ ಪಡೆದುಕೊಂಡರು.

ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಶ್ರೀಮಂಧರ ಪಂಡಿತ, ವಿದ್ಯಾಧರ ಪಾಟೀಲ, ಶಾಂತಿನಾಥ ಹೋತಪೇಟಿ, ತವನಪ್ಪ ಅಷ್ಟಗಿ, ವರ್ಧಮಾನ ನ್ಯಾಮಗೌಡ, ವಿಮಲ ತಾಳಿಕೋಟಿ, ಚಂದ್ರಕಾಂತ ಕಳಸೂರ, ಆರ್.ಟಿ. ತವನಪ್ಪನವರ, ಅಜಿತ ತಟ್ಟಿ, ಶಶಿಧರ ಗೌಡ, ಆರ್.ಬಿ. ಖೋತ, ರಾಜೇಂದ್ರ ಬೀಳಗಿ, ಭಗವಂತ ಬಸಾಪುರ, ಭಗವಂತ ವೆಂಕಣ್ಣವರ ಮೊದಲಾದ ಪ್ರಮುಖರು ಮಾತನಾಡಿದರು.

ಜನ್ಮ ಜಯಂತಿಯನ್ನು ಪೂಜೆ, ಆರಾಧನೆಗಳು ಮಾತ್ರವಲ್ಲದೆ ವಿವಿಧ ಆರೋಗ್ಯ ಸಂಬಂಧಿ ಸಾರ್ವಜನಿಕ ಶಿಬಿರಗಳು, ಸಾಹಿತ್ಯ ಗೋಷ್ಠಿಗಳು, ಸರ್ವಧರ್ಮ ಸಮ್ಮೇಳನ, ವಿವಿಧ ಸ್ಪರ್ಧೆಗಳು, ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಸಲಹೆ ನೀಡಿದರು.

ಭಕ್ತರ ಅಪೇಕ್ಷೆ, ಆಗ್ರಹಗಳ ಮೇರೆಗೆ ಜನಕಲ್ಯಾಣ ಕಾರ್ಯಕ್ರಮಗಳ ಪ್ರಾಮುಖ್ಯತೆಯೊಂದಿಗೆ ಜನ್ಮ ಜಯಂತಿ ಆಚರಣೆಗೆ ಸಮ್ಮತಿಸಿದ ಆಚಾರ್ಯ ಶ್ರೀಗಳು, ವರ್ತಮಾನ ಸ್ಥಿತಿಯಲ್ಲಿ ಸರ್ವರಿಗೂ ಶಿಕ್ಷಣ ಮುಖ್ಯವಾಗಿರುವುದರಿಂದ ತಮ್ಮ 50ನೇ ಜನ್ಮ ಜಯಂತಿ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ 5000 ಬಡ ವಿದ್ಯಾಥಿರ್ಗಳಿಗೆ ಉಚಿತ ಶಿಕ್ಷಣ ಒದಗಿಸುವ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸುವ ಸಂಕಲ್ಪ ಪ್ರಕಟಿಸಿದರು.

50 ಕಡೆಗಳಲ್ಲಿ ರಕ್ತದಾನ ಶಿಬಿರ, 50 ಕ್ಷೇತ್ರಗಳಲ್ಲಿ ಅನ್ನ ಸಂತರ್ಪಣೆ, 50 ಬಸದಿಗಳಿಗೆ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ, ಸಾಧು ಸಂತರ ರಕ್ಷಣೆ ಸಮಿತಿಗಳ ಸ್ಥಾಪನೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ರಾಜ್ಯ ಸರ್ಕಾರವು ಜೈನ ಅಭಿವೃದ್ಧಿ ನಿಗಮ ಸ್ಥಾಪನೆಯ ಭರವಸೆ ನೀಡಿದ್ದು, ಅದರ ಶೀಘ್ರ ಸ್ಥಾಪನೆಗೆ ಆಗ್ರಹಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net