

ಹುಬ್ಬಳ್ಳಿ : ಹುಟ್ಟಿದ ನಂತರ ಯಾರು ಸಾಧನೆ ಮಾಡುತ್ತಾರೋ ಅಥವಾ ಯಾರ ಹುಟ್ಟಿನಿಂದ ಲೋಕಕಲ್ಯಾಣ ಆಗುವುದೋ ಅಂತವರ ಹುಟ್ಟನ್ನು ಹಬ್ಬದಂತೆ ಆಚರಿಸಬೇಕು. ಅಂತಹ ಸಾಧಕರ ಸಾಲಿಗೆ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಸೇರುತ್ತಾರೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಮಠದ ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಸ್ವರ್ಣ ಜನ್ಮಜಯಂತಿ ಮಹಾಮಹೋತ್ಸವದ ಎರಡನೇ ದಿನವಾದ ಮಂಗಳವಾರದಂದು ವರೂರ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಯೋಜಿಸಿದ್ದ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀ ಗುಣಧರನಂದಿ ಮಹಾರಾಜರು ಸಾಧನೆ, ಸಿದ್ದಿಗಳಲ್ಲಿ ಸ್ವರ್ಣ ಆಗಿದ್ದಾರೆ. ಅವರಿಗೆ 100 ವರ್ಷಗಳಾದರೆ ಶತಮಾನದ ಸಂತರಾಗುತ್ತಾರೆ ಎಂದರು.
ಪ್ರತಿಯೊಬ್ಬರ ಬದುಕು ಸಾರ್ಥಕತೆಯಿಂದ ಕೂಡಿರಬೇಕು. ಮಕ್ಕಳ ಹುಟ್ಟುಹಬ್ಬವನ್ನು ಪಾಲಕರು ಆಚರಿಸುವ ಬದಲು, ಇಡೀ ಸಮಾಜ ಮಕ್ಕಳ ಹುಟ್ಟುಹಬ್ಬ ಆಚರಿಸುವಂತಾಗಬೇಕು. ಆ ರೀತಿಯಲ್ಲಿ ಮಕ್ಕಳನ್ನು ಬೆಳೆಯಿಸಿ, ಯೋಗ್ಯರನ್ನಾಗಿಸಬೇಕು ಎಂದು ಸಲಹೆ ನೀಡಿದರು.
ಒಬ್ಬ ಯೋಗಿ, ಸನ್ಯಾಸಿ, ಆಚಾರ್ಯ ಹುಟ್ಟಿದರೆ ಧರ್ಮ ಎದ್ದುನಿಲ್ಲಬೇಕು. ಆಚಾರ್ಯ ಶ್ರೀ ತರುಣಸಾಗರ ಮಹಾರಾಜರ ವಿಚಾರಗಳು ಜಾತಿಬೇಧ ಇಲ್ಲದೇ, ಇಡೀ ಸಮಾಜಕ್ಕೆ ಅನುಕರಣೀಯವಾಗಿದ್ದವು. ಅಂತಹ ವಿಚಾರಧಾರೆಗಳು ಗುಣಧರನಂದಿ ಮಹಾರಾಜರದ್ದೂ ಆಗಿವೆ ಎಂದು ಬಣ್ಣಿಸಿದರು.
ಇಂದಿನ ವ್ಯಾಪಾರಿ ದಿನಗಳಲ್ಲಿ ಕೆಲ ಶಿಕ್ಷಣ ಸಂಸ್ಥೆಗಳು ಹಣ ಗಳಿಕೆಯನ್ನೇ ತಮ್ಮ ಮೂಲ ಉದ್ದೇಶವನ್ನಾಗಿಟ್ಟುಕೊಂಡಿವೆ. ಆದರೆ, ಗುಣಧರನಂದಿ ಮಹಾರಾಜರು ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಪ್ರಾರಂಭಿಸಿರುವ ಶಿಕ್ಷಣ ಸಂಸ್ಥೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಲು ತೀರ್ವನಿಸಿದ್ದಾರೆ ಎಂದು ತಿಳಿಸಿದರು.
ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಆಶೀರ್ವಚನ ನೀಡಿ, ಬ್ರಿಟೀಷರು ಬಿಟ್ಟು ಹೋದ ಕೆಲ ಸಂಸ್ಕೃತಿಗಳಲ್ಲಿ ಹುಟ್ಟುಹಬ್ಬ ಆಚರಣೆಯೂ ಒಂದು. ಹುಟ್ಟುಹಬ್ಬದಂದು ದೀಪ ಆರಿಸುವ ಬದಲು, ದೇವಸ್ಥಾನಗಳಲ್ಲಿ ದೀಪ ಹಚ್ಚಿ. ಆ ದಿನವಾದರೂ ಬಡವರಿಗೆ ಸಹಾಯ ಮಾಡಿ ಎಂದು ಸಲಹೆ ನೀಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಿ.ಜಿ. ಲೋಬೊಗೋಳ, ಅನಿಲ ಚೌಗಲೆ ಹಾಗೂ ಮತ್ತಿತರರು ಇದ್ದರು.