

ಬೆಂಗಳೂರು:ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಕರಾವಳಿ, ಮಲೆನಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ಮಾತ್ರ ಮುಂದಿನ 3 ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಉಡುಪಿ ಜಿಲ್ಲೆಯ ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್, ಕದ್ರಾ, ಬನವಾಸಿ, ಯಲ್ಲಾಪುರ, ಬೆಳಗಾವಿಯ ಖಾನಾಪುರ, ಲೋಂಡಾ, ಶಿವಮೊಗ್ಗದ ಆಗುಂಬೆ, ಕೊಡಗಿನ ಸೋಮವಾರಪೇಟೆ, ದಕ್ಷಿಣ ಕನ್ನಡದ ಧರ್ಮಸ್ಥಳ, ಚಿಕ್ಕಮಗಳೂರಿನ ಕಳಸ ಮತ್ತು ಶೃಂಗೇರಿಯಲ್ಲಿ ಬುಧವಾರವೂ ಧಾರಾಕಾರವಾಗಿ ಮಳೆ ಸುರಿದಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಮಾತ್ರ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಿತ್ತು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ 2 ದಿನ ಹಾಗೂ ಬೆಳಗಾವಿ,ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಜೂ.26ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಧಾರವಾಡ, ಹಾಸನ, ಮೈಸೂರು, ಮಂಡ್ಯದಲ್ಲಿ ಮುಂದಿನ 24 ಗಂಟೆ ಬಿರುಸಾಗಿ ಮಳೆಯಾಗುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ದಾವಣಗೆರೆ,ವಿಜಯನಗರ, ಚಿತ್ರದುರ್ಗ,ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂ.ಗ್ರಾಮಾಂತರ, ಮಂಡ್ಯದಲ್ಲಿ ಮುಂದಿನ 4 ಮೋಡ ಕವಿದ ವಾತಾವರಣದೊಂದಿಗೆ ತುಂತುರು ವರ್ಷಧಾರೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಗಂಟೆಗೆ 40-50 ಕಿ.ಮೀ.ವೇಗದಲ್ಲಿ ನಿರಂತರ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 21 ಡಿ.ಸೆ. ಇರಲಿದೆ.