

ಗಜೇಂದ್ರಗಡ: ತಾಲೂಕಿನ ಜನರ ಮೇಲೆ ಮಳೆರಾಯ ಸೋಮವಾರ ಕರುಣೆ ತೋರಿದ್ದಾನೆ. ಸಂಜೆ ಪಟ್ಟಣ, ತಾಲೂಕಿನ ವಿವಿಧೆಡೆ ರಭಸವಾದ ಮಳೆ ಸುರಿದಿದೆ. ಇಡೀ ದಿನ ತಂಪು ವಾತಾವರಣ ಸೃಷ್ಟಿಯಾಗಿತ್ತು. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಆರಂಭದಲ್ಲಿ ಜಿಟಿಜಿಟಿಯಾಗಿದ್ದ ಮಳೆ ಸಂಜೆ ವೇಳೆ ಕೆಲ ಹೊತ್ತು ರಭಸವಾಗಿ ಸುರಿಯಿತು. ಮಳೆಯಿಂದ ರೈತರು ಹಾಗೂ ಸಾರ್ವಜನಿಕರು ಸಂತಸಪಟ್ಟರು. ಮಕ್ಕಳು ಮಳೆಗೆ ಮೈಯೊಡ್ಡಿ ಸಂಭ್ರಮಿಸಿದರು.
ನರೇಗಲ್ಲ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಉತ್ತಮ ಮಳೆ ಸುರಿದಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ಪ್ರಾರಂಭವಾದ ಮಳೆ ಸಂಜೆ ಹೊತ್ತಿಗೆ ಗುಡುಗಿನೊಂದಿಗೆ ಜೋರಾಗಿ ಹನಿಯಿತು. ಮುಂಗಾರು ಮಳೆಗಳಾದ ರೋಹಿಣಿ, ಮೃಗಶಿರ ಸಂಪೂರ್ಣ ಕೈಕೊಟ್ಟಿದ್ದರೂ ಆರಿದ್ರಾ ಮಳೆ ಕೊನೆಯ ಹಂತದಲ್ಲಿ ಉತ್ತಮವಾಗಿ ಸುರಿಯಲಾರಂಭಿಸಿದೆ. ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಬಹುತೇಕ ಒಣಗಿದೆ. ಈಗ ಬಿದ್ದ ಮಳೆ ಉಳ್ಳಾಗಡ್ಡಿ, ಮೆಣಸಿನಕಾಯಿ ಬಿತ್ತನೆಗೆ ಸಹಾಯಕವಾಗಲಿದೆ. ಕೃಷಿ ಹೊಂಡ, ಕೆರೆ, ಚೆಕ್ ಡ್ಯಾಂ ನೀರಿಲ್ಲದೆ ಖಾಲಿಯಾದ್ದವು. ಸೋಮವಾರ ಸುರಿದ ಮಳೆಯಿಂದ ಅಲ್ಪಸ್ವಲ್ಪ ನೀರು ಸಂಗ್ರಹವಾಗಿದೆ.
ನರಗುಂದ: ಮಂಗಳವಾರ ಮಧ್ಯಾಹ್ನದಿಂದ ಸುರಿಯುತ್ತಿರುವ ಮಳೆ ರೈತ ಸಮೂಹಕ್ಕೆ ಸ್ವಲ್ಪ ಸಮಾಧಾನ ನೀಡಿದೆ. ತಾಲೂಕಿನಾದ್ಯಂತ ಒಂದು ವಾರದಿಂದ ಮಧ್ಯಾಹ್ನ ವಿಪರೀತ ಬಿಸಿಲು, ಬೆಳಗ್ಗೆ ಮತ್ತು ಸಂಜೆಯಾಗುತ್ತಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿತ್ತು. ಕೆಲವೊಮ್ಮೆ ಅಲ್ಪಸ್ವಲ್ಪ ಸುರಿದ ಮಳೆ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿತ್ತು. ಮಂಗಳವಾರ ಮಧ್ಯಾಹ್ನ 3ಗಂಟೆಯಿಂದ 4ಗಂಟೆಯವರೆಗೂ ಜೋರಾದ ಹದ ಮಳೆ ಸುರಿಯಿತು. ಸಂಜೆ 6 ರಿಂದ ನಿರಂತರ ಸುರಿಯುತ್ತಿರುವ ತುಂತುರು ಮಳೆ ಇಳೆಗೆ ತಂಪೆರೆದಿದೆ.
ಮುಂಗಾರು ಕೈಕೊಟ್ಟಿದ್ದರಿಂದ ಬಿತ್ತನೆಗೆ ಹಿನ್ನಡೆಯಾಗಿದೆ. ಬಿತ್ತನೆ ಮಾಡಿರುವ ಬೀಜ ಮೊಳಕೆಯಾಗಲು ಮತ್ತು ಬೆಳೆ ಚಿಗುರೊಡೆಯಲು ಮಳೆಯ ಅವಶ್ಯವಾಗಿತ್ತು. ಸಮೃದ್ಧ ಮಳೆಗಾಗಿ ತಾಲೂಕಿನ ರೈತರು ಕತ್ತೆಗಳ ಮದುವೆ, ಗುರ್ಜಿ ಪೂಜೆ ಮೂಲಕ ದೇವರ ಮೊರೆ ಹೋಗಿದ್ದರು. ಈಗ ತಡವಾಗಿಯಾದರೂ ಮಳೆ ಬಂದ ಕಾರಣ ರೈತರಿಗೆ ತುಸು ನೆಮ್ಮದಿ ನೀಡಿದೆ. ರಾತ್ರಿ 8ಗಂಟೆಯಾದರೂ ಜಿಟಿಜಿಟಿ ಮಳೆ ಮುಂದುವರಿದಿತ್ತು.