

ಬಾಗಲಕೋಟೆ : ಜಿಲ್ಲೆಯಲ್ಲಿ ಒಂದು ದಿನ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಗುರುವಾರ ರಾತ್ರಿ ಅಬ್ಬರಿಸಿದೆ. ಸಂಜೆ 6 ಗಂಟೆಗೆ ಆರಂಭವಾದ ಮಳೆ ಸ್ವಲ್ಪ ಹೊತ್ತು ಬಿಡುವು ನೀಡಿ, ಮತ್ತೆ ರಾತ್ರಿ ಬಿಟ್ಟು ಬಿಡದೇ ಸುರಿಯಲಾರಂಭಿಸಿದೆ.
ಜಿಲ್ಲೆಯ ಬಹುತೇಕ ಕಡೆಗೆ ವರುಣಾರ್ಭಟ ನಡೆದಿದ್ದು, ಬಾಗಲಕೋಟೆ ನಗರದಲ್ಲಿ ಸಂಜೆ ಸುಮಾರು 45 ನಿಮಿಷ ಅಬ್ಬರಿಸಿದ ವರುಣ ಮತ್ತೆ ರಾತ್ರಿ 8 ಗಂಟೆ ಬಳಿಕ ಮತ್ತೆ ತನ್ನ ಅಬ್ಬರ ಮುಂದುವರಿಸಿದ.
ಜಿಲ್ಲೆಯ ಬಹುತೇಕ ಕಡೆಗೂ ಮಳೆ ಸುರಿದಿದ್ದು, ಬಾಗಲಕೋಟೆ, ಬಾದಾಮಿ, ಹುನಗುಂದ, ರಬಕವಿ-ಬನಹಟ್ಟಿ, ಇಳಕಲ್ಲ, ಜಮಖಂಡಿ ತಾಲೂಕುಗಳ ವಿವಿಧೆಡೆ ವರುಣಾರ್ಭಟ ಮುಂದುವರಿದಿದೆ. ಸತತ ಎರಡ್ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆಯಿಂದ ಜನಜೀವನ ಬಹುತೇಕ ಅಸ್ತವ್ಯಸ್ತಗೊಂಡಿದೆ.
ಬಾಗಲಕೋಟೆ ನಗರದಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಯಿತು. ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆಯೂ ಗುರುವಾರವೂ ಮುಂದುವರಿದಿದೆ. ಶುಕ್ರವಾರ ಲಕ್ಷ್ಮಿ ಪೂಜೆ ಇರುವುದರಿಂದ ಗುರುವಾರ ಸಂಜೆ ಬಾಗಲಕೋಟೆ, ವಿದ್ಯಾಗಿರಿ, ಎಲ್‌ಐಸಿ ವೃತ್ತದಲ್ಲಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಮಳೆ ಬಂದಿದ್ದರಿಂದ ವಹಿವಾಟು ಅಸ್ತವ್ಯಸ್ತಗೊಂಡಿತು. ಹೂ, ಬಾಳೆ ಸಸಿ, ಹಣ್ಣು, ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾಸ್ಥರಿಗೆ ತೊಂದರೆಯಾಯಿತು.