ಬೆಳೆಗಾರರ ಮೊಗ ಅರಳಿಸಿದ ವರುಣ; ಹದ ಮಳೆಯಿಂದ ಒಣಗಿದ್ದ ಕಾಫಿ, ಕಾಳುಮೆಣಸಿಗೆ ಜೀವಕಳೆ

12 ckm 4
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಎಸ್ಟೇಟ್‌ನಲ್ಲಿ ಅರಳಿರುವ ಕಾಫಿ ಹೂವು.
Published on

ನಿತ್ಯಾನಂದ ಶಿವಗಂಗೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿ ಹಾಗೂ ಮಲೆನಾಡು ಭಾಗದಲ್ಲಿ ನಿರಂತರವಾಗಿ ಹದಮಳೆಯಾಗುತ್ತಿರುವುದರಿಂದ ಕಾಫಿ ಹಾಗೂ ಕಾಳು ಮೆಣಸು ಬೆಳೆಗಾರರ ಮೊಗ ಕಾಫಿ ಹೂವುಗಳಂತೆಯೇ ಅರಳಲಾರಂಭಿಸಿದೆ. ಈ ಬಾರಿಯ ಬಿರು ಬಿಸಿಲಿನಿಂದಾಗಿ ಕಾಫಿ ಗಿಡಗಳು ಹಾಗೂ ಕಾಳು ಮೆಣಸು ಬಳ್ಳಿಗಳು ಒಣಗಲಾರಂಭಿಸಿದ್ದವು. ಆದರೆ ಏಪ್ರಿಲ್ ತಿಂಗಳ ಅಂತ್ಯದಿಂದ ನಿರಂತರವಾಗಿ ಕೆಲ ದಿನಗಳ ಅಂತರದಲ್ಲಿಯೇ ಮಳೆಯಾಗುತ್ತಿರುವುದರಿಂದಾಗಿ ಈ ಎಲ್ಲ ಬೆಳೆಗಳಿಗೂ ಇದೀಗ ಜೀವಕಳೆ ಬಂದಿದೆ.
ಏಪ್ರಿಲ್ ತಿಂಗಳ ಅಂತ್ಯದಲ್ಲಿ ಬಂದ ಮಳೆಯಿಂದಾಗಿ ಒಣಗದೆ ಇದ್ದ ಕಾಫಿಗಿಡಗಳಲ್ಲಿ ಭರಪೂರ ಹೂವು ಕಾಣಿಸಿಕೊಂಡಿತ್ತು. ಆದರೆ ಮತ್ತೆ ಒಂದು ವೇಳೆ ಮಳೆ ಕೈಕೊಟ್ಟಿದ್ದಲ್ಲಿ ಕಾಫಿ ಹೀಚುಗಟ್ಟದೆ ಇಳುವರಿ ಕುಂಠಿತಗೊಳ್ಳುವ ಆತಂಕ ಎದುರಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೆ ಕೆಲ ದಿನಗಳ ಅಂತರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದಾಗಿ ಕಾಫಿ ಹೀಚುಗಟ್ಟಲು ಉತ್ತಮ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತಾರೆ ಕಾಫಿ ಬೆಳೆಗಾರರು.
ಡಿಸೆಂಬರ್, ಜನವರಿ, ಫ್ರೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಬಿಸಿಲಿನಲ್ಲಿ ಬಾಡಿದಂತಾಗುವ ಕಾಫಿ ಗಿಡಗಳು ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಸುರಿಯುವ ಮಳೆಯಲ್ಲಿ ಮತ್ತೆ ಹಸಿರಿನಿಂದ ಕಂಗೊಳಿಸುವ ಜತೆಗೆ ಹೂವು ಬಿಡುವ ಮೂಲಕ ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತವೆ. ರಸ್ತೆಯಲ್ಲಿ ಹೋಗುವಾಗ ಎಲ್ಲೆಲ್ಲೂ ಬಿಳಿ ಹೂವುಗಳೇ ಕಾಣಿಸುತ್ತವೆ. ಜತೆಗೆ ಹೂವುಗಳ ಸುವಾಸನೆ ಮನಸಿಗೆ ಮುದ ನೀಡುತ್ತದೆ. ಹೀಗೆ ಹೂವಾದ ಬಳಿಕ ಮಳೆ ಬಂದಲ್ಲಿ ಹೂವು ಹೀಚಾಗಿ ಪರಿವರ್ತನೆಗೊಂಡು ಕಾಳುಗಟ್ಟಲಾರಂಭಿಸುತ್ತದೆ. ಇದೀಗ ಸುರಿಯುತ್ತಿರುವ ಮಳೆ ಕಾಫಿ ಕಾಳುಗಟ್ಟಲು ಪೂರಕ ವಾತಾವರಣ ನಿರ್ಮಾಣ ಮಾಡಿದ್ದರಿಂದಾಗಿ ಬೆಳೆಗಾರರು ಸಂತಸಗೊಂಡಿದ್ದಾರೆ.

ಗಿಡಗಳಿಗೆ ಮರುಜೀವ
ಈ ಬಾರಿ ಬಿರುಬಿಸಿಲ ಬೇಗೆಯಿಂದಾಗಿ ನೂರಾರು ಎಕರೆಯಲ್ಲಿ ಕಾಫಿ ಬೆಳೆ ಒಣಗಿ ನಿಂತಿತ್ತು. ನಿರಂತರವಾಗಿ ಮಳೆಯಾಗದೇ ಇದ್ದು ಬಿಸಿಲಿನ ಝಳ ಹಿಂದಿನಂತೆಯೇ ಇದ್ದರೆ ಕಾಫಿ ಗಿಡಗಳನ್ನೇ ಕಳೆದುಕೊಳ್ಳುವ ಆತಂಕದಲ್ಲಿ ಕಾಫಿ ಬೆಳೆಗಾರರು ಇದ್ದರು. ಆದರೆ ಏಪ್ರಿಲ್ ವೇಳೆಯಲ್ಲಿ ಮಳೆ ಬಂದಿದ್ದರಿಂದಾಗಿ ಕಾಫಿ ಗಿಡಗಳು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದವು. ಆದರೆ ಮತ್ತೆ ಬಿಸಿಲ ಆರ್ಭಟ ಹೆಚ್ಚಿದ್ದರಿಂದಾಗಿ ಮತ್ತೆ ಗಿಡಗಳು ಬಾಡಲಾರಂಭಿಸಿದ್ದವು. ಇದೀಗ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದಾಗಿ ಒಣಗುವ ಹಂತ ತಲುಪಿದ್ದ ಕಾಫಿ ಗಿಡಗಳಿಗೆ ಇದೀಗ ಮರುಜೀವ ಬಂದಿದ್ದು ಹಸಿರಾಗಲಾರಂಭಿಸಿವೆ. ಸಂಪೂರ್ಣವಾಗಿ ಒಣಗುವ ಹಂತ ತಲುಪಿದ್ದ ಕಾಫಿ ಗಿಡಗಳಿಗೆ ಈಗ ಸುರಿಯುತ್ತಿರುವ ಮಳೆಯಿಂದಾಗಿ ಮರುಜೀವ ಬಂದಿದೆ. ಆದರೆ ಈ ಗಿಡಗಳಿಂದ ಈ ಬಾರಿ ಫಸಲನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಗಿಡಗಳು ಉಳಿದದ್ದೇ ದೊಡ್ಡದು ಎಂದು ಸಮಾಧಾನಪಟ್ಟುಕೊಳ್ಳಬೇಕಿದೆ. ಆದರೆ ಚೆನ್ನಾಗಿದ್ದ ಗಿಡಗಳನ್ನು ಈ ಬಾರಿ ಉತ್ತಮ ಫಸಲು ನೀರೀಕ್ಷಿಸಬಹುದಾಗಿದೆ ಎನ್ನುತ್ತಾರೆ ಕಾಫಿ ಬೆಳೆಗಾರ ಹೊಲದಗದ್ದೆ ಗಿರೀಶ್.
ಉಳಿದ ಬಳ್ಳಿಗಳು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ಹಿಂದೆಂದೂ ಕಾಣದ ಉರಿಬಿಸಿಲಿನಿಂದಾಗಿ ಕಾಫಿ ಗಿಡಗಳ ಜತೆಗೆ ಕಾಳುಮೆಣಸು ಬಳ್ಳಿಗಳೂ ಬಿಸಿಲನ್ನು ತಡೆಯಲಾರದೆ ಸಾಯಲಾರಂಭಿಸಿದ್ದವು. ಚಿಕ್ಕಮಗಳೂರು ಹೊರವಲಯ ಮಲಂದೂರು, ಆಲದಗುಡ್ಡೆ ಭಾಗದಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ಕಾಳುಮೆಣಸು ಬಳ್ಳಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು. ಜತೆಗೆ ಬಿಸಿಲಿನ ಝಳ ಅದೇ ರೀತಿ ಮುಂದುವರಿದಿದ್ದರೆ ಸಾವಿರಾರು ಎಕರೆ ಪ್ರದೇಶದಲ್ಲಿನ ಕಾಳುಮೆಣಸು ಬಳ್ಳಿಗಳು ಬಿಸಿಲಿಗೆ ಆಪೋಷನವಾಗುವ ಸಾಧ್ಯತೆಯಿತ್ತು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆ ಕಾಳುಮೆಣಸು ಬೆಳೆಯನ್ನು ಉಳಿಸಿದೆ. ಏಪ್ರಿಲ್ ಅಂತ್ಯದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಿಸಿಲಿನಿಂದ ಸಾಯದೇ ಉಳಿದಿದ್ದ ಬಳ್ಳಿಗಳಲ್ಲಿ ಗರಿಹೊರಡಲು ಆರಂಭಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಗರಿಗಳಲ್ಲಿ ಕಾಳುಗಟ್ಟಲಿವೆ. ಒಂದು ವೇಳೆ ಮಳೆಯಾಗದೇ ಇದ್ದಲ್ಲಿ ಕಾಳುಮೆಣಸು ಬಳ್ಳಿಗಳಲ್ಲಿ ಗರಿಹೊರಡದೆ ಇಳುವರಿ ಸಂಪೂರ್ಣವಾಗಿ ಕುಸಿಯುವ ಭೀತಿಯಲ್ಲಿ ಕಾಳುಮೆಣಸು ಬೆಳೆಗಾರರಿದ್ದರು. ಇದೀಗ ಸುರಿಯುತ್ತಿರುವ ಮಳೆ ಬೆಳೆಗಾರರ ಆತಂಕ ದೂರ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net