ಮುನಿಯಪ್ಪ ನನ್ನ ಕೈ ಬಿಡಲ್ಲ, ನಾನೂ ಅವರ ಕೈ ಬಿಡಲಾರೆ, ಮಾಜಿ ಶಾಸಕ ವರ್ತೂರು ಆರ್.ಪ್ರಕಾಶ್ ವಿಶ್ವಾಸ

3-klr-16
Published on

ಕೋಲಾರ: ಗ್ರಾಪಂ ಚುನಾವಣೆಯಲ್ಲಿ ನನ್ನ ಬೆಂಬಲಿತ ಅಭ್ಯರ್ಥಿಗಳಿಗೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ದುಡ್ಡು ಎಂದು ಆರ್ಥಿಕ ಸಹಾಯ ಮಾಡಿದ್ದಾರೆ. ಅವರು ನನ್ನ ಕೈ ಬಿಡಲ್ಲ, ನಾನೂ ಅವರ ಕೈ ಬಿಡಲಾರೆ ಎಂದು ಮಾಜಿ ಶಾಸಕ ವರ್ತೂರು ಆರ್.ಪ್ರಕಾಶ್ ನುಡಿದರು.

ನಗರ ಹೊರವಲಯದ ಕೋಗಿಲಹಳ್ಳಿಯಲ್ಲಿ ಗ್ರಾಪಂ ಚುನಾವಣೆಯಲ್ಲಿ ವಿಜೇತರಾದ ಬಣದ ಸದಸ್ಯರಿಗೆ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಅನಾರೋಗ್ಯದಿಂದ ನನಗೆ ಗ್ರಾಪಂ ಚುನಾವಣೆಗೆ ಬರಲಾಗಲಿಲ್ಲ. ಆದರೂ ಮುನಿಯಪ್ಪ ನನ್ನ ಕಷ್ಟ ಅರಿತು ಕಾರ್ಯಕರ್ತರನ್ನು ಕೈ ಹಿಡಿದಿದ್ದಾರೆ ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಶಾಸಕರಾದ ವಿ.ಮುನಿಯಪ್ಪ, ಎಸ್.ಎನ್.ನಾರಾಯಣಸ್ವಾಮಿ, ಕೆ.ಆರ್.ರಮೇಶ್‌ಕುಮಾರ್, ನಸೀರ್ ಅಹಮದ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಡಾ.ಸುಧಾಕರ್ ಕೆಎಚ್ ವಿರುದ್ಧ ಕೆಲಸ ಮಾಡಿದರೂ, ನಾನು ಅವರ ಪರ ಕೆಲಸ ಮಾಡಿದ್ದೇನೆ. ಅವರಿಗೆ ತನ್ನ ಶಿಷ್ಯರು ಯಾರು ಎಂಬುದು ಗೊತ್ತು. ಆದ್ದರಿಂದ ಅವರು ನನ್ನ ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಶ್ರೀನಿವಾಸಗೌಡಗೆ ಸವಾಲು: ಕ್ಷೇತ್ರದ 18 ಗ್ರಾಪಂಗಳಲ್ಲಿ 202 ಸದಸ್ಯರು ಗೆದ್ದಿದ್ದಾರೆ. ಉಳಿದ 140 ಮಂದಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು. 15 ಗ್ರಾಪಂಗಳಲ್ಲಿ ನಮ್ಮ ಬಣ ಯಾರ ಸಹಕಾರ ಇಲ್ಲದೆ ಆಡಳಿತ ಹಿಡಿಯಲಿದೆ. ಅತಂತ್ರ ಸ್ಥಿತಿಯಿರುವ ಕ್ಯಾಲನೂರು, ನರಸಾಪುರ, ವಕ್ಕಲೇರಿಯಲ್ಲಿ ಜೆಡಿಎಸ್ ಇಲ್ಲ. ಜೆಡಿಎಸ್‌ಗೆ 2-3 ಪಂಚಾಯಿತಿಗಳಲ್ಲಾದರೂ ಬಹುಮತ ಇದ್ದರೆ ಸಾಬೀತುಪಡಿಸಲಿ ಎಂದು ಶಾಸಕ ಶ್ರೀನಿವಾಸಗೌಡರಿಗೆ ಸವಾಲು ಹಾಕಿದರು.

ಸಚಿವ ಕೆ.ಎಸ್.ಈಶ್ವರಪ್ಪ, ಸಿಎಂ ಯಡಿಯೂರಪ್ಪ ನನ್ನ ಜೇಬಿನಲ್ಲಿದ್ದಾರೆ. ಅಧ್ಯಕ್ಷನನ್ನಾಗಿ ಮಾಡ್ತೀನಿ ಎಂದು ಬಿಜೆಪಿಯವರು ಕಿವಿಯಲ್ಲಿ ಹೂವು ಇಡುವ ಕೆಲಸ ಮಾಡಬಹುದು. ಸಿಎಂ ಬಂದರೂ ಮೀಸಲಾತಿ ಬದಲಾಯಿಸಲಾಗದು. ಟೊಮ್ಯಾಟೊ ಕಾಸಿಗೆ ಯಾಮಾರಬೇಡಿ. ಪಂಚಾಯಿತಿಯಲ್ಲಿ ಆಡಳಿತ ಹಿಡಿಯಿರಿ ಎಂದರು.

ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಮಾತನಾಡಿ, ವರ್ತೂರು ಪ್ರಕಾಶ್ ಜನ್ಮದಿನದಂದು ಸಿದ್ದರಾಮಯ್ಯ ಅವರಿಂದ ಆಶೀರ್ವಾದ ಪಡೆದು 1 ಗಂಟೆ ರಾಜಕೀಯ ಬಗ್ಗೆ ಮಾತನಾಡಿಕೊಂಡು ಬಂದಿದ್ದೇವೆ. ಮುಂದೆ ಶಾಸಕರಾಗಿ, ಮಂತ್ರಿಯಾಗಿ ಕಾಣುವ ದಿನ ಹತ್ತಿರದಲ್ಲಿ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಅನೇಕ ಗ್ರಾಪಂಗಳಲ್ಲಿ 4ರಿಂದ 50 ಮತದಲ್ಲಿ ಸೋತಿದ್ದಾರೆ. ನಮ್ಮವರೇ ಕಾಲು ಎಳೆಯದಿದ್ದರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 5 ದಿನ ತ್ಯಾಗ ಮಾಡಿ ದುಡಿದರೆ 5 ವರ್ಷ ನೆಮ್ಮದಿಯಾಗಿರಬಹುದು ಎಂದರು.

ಜಿಪಂ ಸದಸ್ಯರಾದ ಅರುಣ್‌ಪ್ರಸಾದ್, ರೂಪಶ್ರೀ, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಮುಖಂಡರಾದ ಬಂಕ್ ಮಂಜು, ವಿ.ಮಂಜುನಾಥ್, ಸಿ.ಸೋಮಶೇಖರ್, ಜನಾದರ್ನ್, ಅಪ್ಪಯ್ಯಪ್ಪ, ತಂಬಿಹಳ್ಳಿ ಮುನಿಯಪ್ಪ ಇತರರು ಇದ್ದರು.

ಬಿರಿಯಾನಿಗೆ ಮುಗಿಬಿದ್ದ ಜನ: ಗ್ರಾಪಂ ನೂತನ ಸದಸ್ಯರಿಗೆ ಸನ್ಮಾನ ಆರಂಭವಾಗುತ್ತಿದ್ದಂತೆ ಇನ್ನೊಂದೆಡೆ ಕಾರ್ಯಕರ್ತರು, ನೂತನ ಸದಸ್ಯರಿಗೆ ಭರ್ಜರಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಕಾರ್ಯಕರ್ತರು ಊಟಕ್ಕೆ ಮುಗಿ ಬಿದ್ದಿದ್ದ ದೃಶ್ಯ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net