ವರ್ಷಾಳ ಒಳಗಣ್ಣು ಸಾಧನೆಗೆ ಹಾದಿ

HYR SANMANA 17 (1)
Published on

ಹಿರಿಯೂರು: ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡದ ನಾಯಕಿ ವರ್ಷಾ ಸಾಧನೆ ಯುವ ಸಮೂಹಕ್ಕೆ ಸ್ಫೂರ್ತಿಯಾಗಿದೆ ಎಂದು ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಆದಿವಾಲ ಚೇತನ ಯುವಕ ಸಂಘ-ಯುವಜನ ಒಕ್ಕೂಟ, ರೋಟರಿ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ, ಗ್ರಾಮಸ್ಥರ ಸಹಯೋಗದಲ್ಲಿ ನಗರದ ರೋಟರಿ ಭವನದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗೌರವ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ಅಂಗವಿಲತೆಯನ್ನು ಬದುಕಿನ ಮೆಟ್ಟಿಲಾಗಿಸಿಕೊಂಡು ಒಳಗಣ್ಣು ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಮಿಂಚು ಹರಿಸಿರುವ ವರ್ಷಾ ಸಾಧನೆ ಶ್ಲಾಘನೀಯ ಎಂದರು.

ದೃಷ್ಟಿಯುಳ್ಳವರಲ್ಲಿ ನೋಡುವ ಶಕ್ತಿ ಇರುವುದರಿಂದ ಸಾಧನೆ ಸಹಜವಾಗಿರುತ್ತದೆ. ಆದರೆ, ದೃಷ್ಟಿಯಿಲ್ಲದೆ ಈ ಪ್ರಪಂಚದ ಘಟನಾವಳಿಗಳನ್ನು ಒಂದು ಬಾರಿಯೂ ಕಣ್ಣು ತೆರೆದು ನೋಡದೆ ಕ್ರಿಕೆಟ್‌ನಲ್ಲಿ ತೊಡಗಿ ಸಾಧನೆ ಮಾಡುತ್ತಿರುವುದು, ವಿಶ್ವ ಮಟ್ಟದಲ್ಲಿ ಕರುನಾಡು ಪಾತಕೆ ಪಸರಿಸದ್ದು ಅದ್ಭುತವಾಗಿದೆ. ವರ್ಷಾಳ ಸಾಧನೆಯನ್ನು ಸರ್ಕಾರ, ಉಳ್ಳವರು ಕಣ್ಣು ತೆರೆದು ನೋಡುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ ಎಂದು ಹೇಳಿದರು.

ಗೌರವ ಸ್ವೀಕರಿಸಿ ಮಾತನಾಡಿದ ವರ್ಷಾ, ನನ್ನ ಈ ಸಾಧನೆ ದೇಶ ಮತ್ತು ನಮ್ಮ ಕುಟುಂಬಕ್ಕೆ ಅರ್ಪಿಸುತ್ತೇನೆ. ನಮ್ಮಲ್ಲಿನ ಸಮಸ್ಯೆಗಳನ್ನು ಒಪ್ಪಿಕೊಂಡು, ಸತತ ಪರಿಶ್ರಮದಿಂದ ಮುನ್ನೆಡೆದರೆ ಜೀವನದಲ್ಲಿ ಅದ್ಬುತ ಸಾಧನೆ ಮಾಡಬಹುದು ಎಂದರು.

ಡಿವೈಎಸ್ಪಿ ಚೈತ್ರಾ ಮಾತನಾಡಿ, ವರ್ಷಾ ಸಾಧನೆ ಪ್ರತಿಯೊಬ್ಬರಿಗೂ ಸ್ಪೂರ್ತಿ ಹಾಗೂ ಮಾದರಿ. ಈ ಯುವತಿಗೆ ಸರ್ಕಾರ ನೆರವು ನೀಡಬೇಕು ಎಂದು ಹೇಳಿದರು.

ತಾಪಂ ಮಾಜಿ ಸದಸ್ಯ ಫಕ್ರುದ್ದೀನ್, ನಗರಸಭೆ ಪೌರಾಯುಕ್ತ ಮಹಂತೇಶ್, ರೋಟರಿ ಅಧ್ಯಕ್ಷ ದೇವರಾಜಮೂರ್ತಿ, ಪ್ರಗತಿಪರ ರೈತ ಟಿ.ತ್ರಿಯಂಬಕಮೂರ್ತಿ, ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಬಬ್ಬೂರು ಪ್ರಶಾಂತ್, ಆಯೋಜಕ ಯುವಜನ ಒಕ್ಕೂಟದ ಅಧ್ಯಕ್ಷ ಚಮನ್ ಷರೀಫ್, ಪಾಲಕರಾದ ಉಮಾಪತಿ, ಯಶೋದಾ, ರಮೇಶ್, ಚಿಕ್ಕಮ್ಮ ಪುಷ್ಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net