

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾವನೆ ಅರಳಿಸುವ ಪ್ರಬಲ ಮಾಧ್ಯಮ ಚಿತ್ರಕಲೆ. ಚಿತ್ರಕಲೆ ನಮ್ಮ ಬದುಕನ್ನು ಸುಂದರಗೊಳಿಸುತ್ತದೆ ಎಂದು ಕಲಾ ಚಿಂತಕ ಡಾ. ಶಿವಾನಂದ ಶೆಟ್ಟರ್ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಇತ್ತೀಚೆಗೆ ಆಯೋಜಿಸಿದ್ದ ಕಲಾವಿದ ಅಶೋಕ ಯು. ಅವರ ವರ್ಣವಿಕಾಸ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಮಗುವಿಗೆ ಗೊತ್ತಿರುವ ಭಾಷೆ ಚಿತ್ರಕಲೆ. ಓದು ಬರಹದ ಮೊದಲು ಮಗುವಿಗೆ ಚಿತ್ರ ಬರೆಯುವ ಹವ್ಯಾಸ ರೂಢಿಸಬೇಕು. ಇಂದು ಚಿತ್ರಕಲಾವಿದರು ತಮ್ಮ ಸಾಂಪ್ರದಾಯಿಕ ಕಲೆ ಬದಲಿಸಿ ಪ್ರಯೋಗಶೀಲತೆಯನ್ನು ಬೆಳೆಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಹಿರಿಯ ಚಿತ್ರ ಕಲಾವಿದ ಎಫ್.ವಿ. ಚಿಕ್ಕಮಠ ಮಾತನಾಡಿದರು. ಹಿರಿಯ ಕಲಾವಿದ ಬಿ. ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರ ಕಲಾವಿದ ಅಶೋಕ ಯು. ತಮ್ಮ ಚಿತ್ರಕಲಾ ಪಯಣದ ಅನುಭವಗಳನ್ನು ಹಂಚಿಕೊ0ಡರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.
ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ಡಾ. ಜಿನದತ್ತ ಹಡಗಲಿ, ಎಸ್.ಕೆ. ಪತ್ತಾರ, ಡಾ. ಬಸವರಾಜ ಕುರಿಯವರ, ಎಂ.ಆರ್. ಬಾಳಿಕಾಯಿ, ಪ್ರತಾಪ್ ಬಹುರೂಪಿ, ಡಿ.ಎಂ. ಬಡಿಗೇರ, ಇತರರಿದ್ದರು.