

ಮುಂಡರಗಿ: ವಕ್ಪ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಂಡರಗಿ ಮಂಡಲದ ಕಾರ್ಯಕರ್ತರು ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರ ಮೂಲಕ ಗದಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಮುಡಾ, ವಾಲ್ಮೀಕಿ ನಿಗಮ ಹೀಗೆ ವಿವಿಧ ಹಗರಣಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಅದೇ ಈ ಸರ್ಕಾರದ ಸಾಧನೆಯಾಗಿದೆ ಎಂದರು.
ರಾಜ್ಯದ ಹಲವೆಡೆ ರೈತರ ಜಮೀನು, ದೇವಸ್ಥಾನಗಳು, ಸರ್ಕಾರದ ಅಧೀನದಲ್ಲಿರುವ ಆಸ್ತಿಗಳನ್ನು ತನ್ನದೆಂದು ವಕ್ಪ್ ಬೋರ್ಡ್ ಹೇಳುತ್ತಿದೆ. ವಕ್ಪ್ ಬೋರ್ಡ್ನಿಂದ ಆಗುತ್ತಿರುವ ಈ ರೀತಿ ಗೊಂದಲಗಳು ರಾಜ್ಯದಲ್ಲಿನ ಸಾಮರಸ್ಯ ಹದಗೆಡಲು ಕಾರಣವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿ ಪಹಣಿ ಪತ್ರದಲ್ಲಿ ವಕ್ಪ್ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆ ತಂತ್ರಗಾರಿಕೆ. ಬಿಜೆಪಿ ಈ ತಂತ್ರಗಾರಿಕೆ ಒಪ್ಪುವುದಿಲ್ಲ. ಮತ್ತದೇ ಕೃತ್ಯಗಳನ್ನು ಕಾಂಗ್ರೆಸ್ ಸರ್ಕಾರ ಮುಂದುವರಿಸಿದರೆ ರಾಜ್ಯದ ಜನತೆಯನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಪ್ರಮುಖ ಎಸ್.ಎ. ದೇಸಾಯಿ ಮಾತನಾಡಿದರು. ಬಿಜೆಪಿ ಮುಂಡರಗಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತಗೌಡ ಗುಡದಪ್ಪನವರ, ಕುಮಾರಸ್ವಾಮಿ ಹಿರೇಮಠ, ಕೊಟ್ರೇಶ ಅಂಗಡಿ, ರಮೇಶ ಹುಳಕಣ್ಣವರ, ಜ್ಯೋತಿ ಹಾನಗಲ್, ಎಸ್.ಎಸ್. ಗಡ್ಡದ, ಪರಶುರಾಮ ಕರಡಿಕೊಳ್ಳ, ಪರಶುರಾಮ ಸುಣಗಾರ, ಶ್ರೀನಿವಾಸ ಅಬ್ಬಿಗೇರಿ, ಮಾರುತಿ ನಾಗರಹಳ್ಳಿ, ಪವಿತ್ರಾ ಕಲ್ಲಕುಟಗರ್, ಶಿವಕುಮಾರ ಕುರಿ, ದೇವು ಹಡಪದ, ಮಹೇಶ ಪವಾರ, ಮಹಾಂತೇಶ ಕಲಾಲ, ಬಸವರಾಜ ಚಿಗಣ್ಣವರ, ವೆಂಕಟೇಶ ಯಕ್ಲಾಸಪುರ, ಎ.ವಿ. ಗುರ್ನಳ್ಳಿ, ರವಿ ಲಮಾಣಿ, ಅರುಣಾ ಪಾಟೀಲ, ಪುಷ್ಪಾ ಉಕ್ಕಲಿ, ಪ್ರಭಾವತಿ ಬೆಳವಣಕಿಮಠ, ಶೋಭಾ ಜೋಶಿ, ಮಂಜುನಾಥ ಕಮತಾರ, ಬಸವರಾಜ ಅಗ್ಗದ, ಆನಂದ ಕೊರ್ಲಹಳ್ಳಿ ಇತರರು ಇದ್ದರು.