ಪತ್ರಿವನಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

VV DIGITAL
Published on

ನರಗುಂದ: ಪಟ್ಟಣದ ಮಹಾ ತಪೋತಾಣ ಪುಣ್ಯಾರಣ್ಯ ಪತ್ರಿವನಮಠದ ಶ್ರೀಗುರು ಶಂಭುಲಿಂಗೇಶ್ವರ ಜಾತ್ರಾ ಮಹೊತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ಆರಂಭಗೊಂಡಿದ್ದು, ಆ. 6ರವರೆಗೆ ಶ್ರೀಮಠದ ಪೀಠಾಧ್ಯಕ್ಷ ಡಾ.ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆಯಲಿವೆ.

ಪ್ರಣವ ಧ್ವಜಾರೋಹಣ ಹಾಗೂ ಜಾತ್ರಾ ಮಹೋತ್ಸವ ಪ್ರಾರಂಭೋತ್ಸವಕ್ಕೆ ವಿರಕ್ತಮಠದ ಶಿವಕುಮಾರ ಮಹಾಸ್ವಾಮಿಗಳು ಬುಧವಾರ ಚಾಲನೆ ನೀಡಿದ್ದಾರೆ. ಆ. 2ರಂದು ಬಾದಾಮಿ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವಟುಗಳಿಗೆ ಲಿಂಗದೀಕ್ಷೆ, ಅಯ್ಯಚಾರ ಹಾಗೂ ಶ್ರೀದೇವಿ ಪಾರಾಯಣ ದೀಕ್ಷೆ ಹಾಗೂ ಪಟ್ಟಣದ ಹಗೇದಕಟ್ಟಿ ಓಣೆಯಿಂದ ಸಕಲ ವಾದ್ಯ ವೈಭವದೊಂದಿಗೆ ಶ್ರೀಮಠಕ್ಕೆ ನಂದಿ ಧ್ವಜ ಬರಮಾಡಿಕೊಳ್ಳಲಾಗುವುದು. ಆ. 3 ಮತ್ತು 4 ರಂದು ಧರ್ಮಸಭೆ, ಆ. 5ರಂದು ಶ್ರೀಮಠದಿಂದ ಬಿಲ್ವಶ್ರೀ ಹಾಗೂ ಗುರು ಶಂಭುಲಿಂಗ ಶ್ರೀ ಪ್ರಶಸ್ತಿ ಪ್ರದಾನ, ತುಲಾಭಾರ, ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಜೋಗತಿಯರಿಂದ ಸೇವಾರ್ಪಣೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗುವುದು. ಆ. 6ರಂದು ಕತೃಪೀಠಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಲಂಕಾರ ಪೂಜಾ ಶಿವನಾಮ ಸಪ್ತಾಹ ಮಂಗಲೋತ್ಸವ, ಧರ್ಮಸಭೆ, ಕಾರ್ಗಿಲ್ ವಿಜಯೋತ್ಸವ ನಡೆಯಲಿವೆ. ಸಂಜೆ 5 ಗಂಟೆಗೆ ಶ್ರೀಗುರು ಶಂಭುಲಿಂಗೇಶ್ವರರ ಮಹಾರಥೋತ್ಸವ, ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿವೆ ಎಂದು ಬಿ.ಎಂ. ಬೀರನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net