

ಮೈಸೂರು: ನಗರದ ಇಸ್ಕಾನ್ ದೇವಸ್ಥಾನದಲ್ಲಿ ‘ವೈಕುಂಠ ಏಕಾದಶಿ’ ಅಂಗವಾಗಿ ಡಿ.23 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಧಾನ ವ್ಯವಸ್ಥಾಪಕ ಪಂಕಜಾಂಘ್ರಿದಾಸ ಹೇಳಿದರು.
ದೇವಸ್ಥಾನದಲ್ಲಿ ವಿಶಿಷ್ಟವಾದ ‘ವೈಕುಂಠ ದ್ವಾರ’ವನ್ನು ನಿರ್ಮಿಸಲಾಗುತ್ತಿದೆ. ದ್ವಾರದ ಮೂಲಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ. 20 ಸಾವಿರ ಭಕ್ತರು ಬರುವ ನಿರೀಕ್ಷೆ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಂದು ಬೆಳಗ್ಗೆ 6.30ಕ್ಕೆ ವೈಕುಂಠ ದ್ವಾರ ಪೂಜೆ ಮಾಡಲಾಗುತ್ತದೆ. 7.15ಕ್ಕೆ ಶೃಂಗಾರ ಆರತಿ ನಡೆಯಲಿದೆ. ಬಳಿಕ ಕೃಷ್ಣ-ಬಲರಾಮರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಭಕ್ತರಿಗೆ 7.30 ರಿಂದ ರಾತ್ರಿ 10 ಗಂಟೆವರೆಗೆ ವೈಕುಂಠ ದ್ವಾರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಬೆಳಗ್ಗೆ 9 ರಿಂದ ರಾತ್ರಿ 10 ಗಂಟೆವರೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ‘ವೈಕುಂಠ ಏಕಾದಶಿ’ ಹಾಗೂ ಕೃಷ್ಣನು ಅರ್ಜುನನಿಗೆ ಭಗವದ್ಗೀತೆ ಬೋಧಿಸಿದ ದಿನವಾದ ಗೀತ ಜಯಂತಿ ಒಟ್ಟಿಗೆ ಬಂದಿದೆ. ಹಾಗಾಗಿ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆವರೆಗೆ ಭಗವದ್ಗೀತೆಯ ಸಂಪೂರ್ಣ 700 ಶ್ಲೋಕಗಳ ಪಠಣವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಧನುರ್ಮಾಸದಲ್ಲಿ ಬರುವ ವೈಕುಂಠ ಏಕಾದಶಿಯು ಮಹಾವಿಷ್ಣುವಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ಹಬ್ಬವಾಗಿದೆ. ಪುಷ್ಯ ಮಾಸದ ಶುಕ್ಲಪಕ್ಷದ ಹನ್ನೊಂದನೇ ದಿನ ಆಚರಿಸುವ ಈ ಏಕಾದಶಿಯಂದು ವೈಕುಂಠದ ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಅಂದು ಶ್ರದ್ಧೆ, ಭಕ್ತಿಯಿಂದ ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿದ್ದಲ್ಲಿ ಅವರಿಗೆ ವೈಕುಂಠ ಲೋಕ ಪ್ರಾಪ್ತಿಯಾಗುತ್ತದೆ ಎಂದು ಪದ್ಮ ಪುರಾಣದಲ್ಲಿದೆ ಎಂದರು.
ಜ.6 ರಂದು ಕೃಷ್ಣ-ಬಲರಾಮರ ರಥೋತ್ಸವ ನಡೆಯಲಿದೆ. ಅಂದು ಸಂಜೆ 4.30ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭವಾಗುವ ರಥೋತ್ಸವವು ಡಿ.ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ನೂರಡಿ ರಸ್ತೆ, ಜೆಎಲ್‌ಬಿ ರಸ್ತೆ, ಬಲ್ಲಾಳ್ ವೃತ್ತ, ಜಯನಗರ ಮೂಲಕ ಇಸ್ಕಾನ್ ದೇವಸ್ಥಾನದವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.