

ಮಡಿಕೇರಿ: ಮಡಿಕೇರಿಯ ಕರ್ಣಂಗೇರಿ ಗ್ರಾಮದಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ.೧೮ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಧರ್ಮದರ್ಶಿ ಗೋವಿಂದಸ್ವಾಮಿ ತಿಳಿಸಿದರು.
ಅಂದು ಬೆಳಿಗ್ಗೆ ೯ ಗಂಟೆಯಿಂದ ಅಂದು ಬೆಳಿಗ್ಗೆ ೯ ಗಂಟೆಯಿಂದ ಕಾಶಿಲಿಂಗಕ್ಕೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಂತರ ಭಕ್ತಾದಿಗಳಿಂದ ಪಂಚಲಿಂಗಕ್ಕೆ ಪವಿತ್ರ ಗಂಗಾಜಲದಿಂದ ಅಭಿಷೇಕ ಮತ್ತು ಶಿವನ ಮೂರ್ತಿಗೆ ಪುಷ್ಪಾರ್ಚನೆಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಸಂಜೆ ೭ ಗಂಟೆಗೆ ಭಕ್ತಾಧಿಗಳಿಗೆ ದೀಪಲಂಕಾರ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ ೮ ಗಂಟೆಗೆ ತಾಯಿಯ ದರ್ಶನ ಇರುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಂಜೆ ಭಕ್ತಿ ಪ್ರಧಾನ ಸಾಂಸ್ಕ೭ತಿಕ ಕಾರ್ಯಕ್ರಮ ಹಾಗೂ ರಾತ್ರಿ ೯ ಗಂಟೆಗೆ ನೆಲ್ಚಿಬೊಳಿ ಕೊಡವ ಚಲನಚಿತ್ರ ಪ್ರದರ್ಶನ ಇರಲಿದೆ ಎಂದರು.
ಆಡಳಿತ ಮಂಡಳಿ ಪ್ರಮುಖರಾದ ತಾರಾ ಪ್ರಸಾದ್ ಮಾತನಾಡಿ, ದೇವಾಲಯದಲ್ಲಿ ಸ್ಥಾಪಿಸಲಾಗಿರುವ ೫೨ ಅಡಿ ಎತ್ತರದ ಶಿವನ ವಿಗ್ರಹವನ್ನು ೨೦೧೬ರ ಮಾ. ೪ ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಶ್ರೀವೀರೇಂದ್ರ ಹೆಗ್ಗಡೆ ಲೋಕಾರ್ಪಣೆಗೊಳಿಸಿದರು. ಗರ್ಭಗುಡಿಯಲ್ಲಿ ಕಾಶಿಲಿಂಗ ಪ್ರತಿಷ್ಠಾಪನೆಯಾಗಿದ್ದು, ವಿಗ್ರಹದ ಸುತ್ತ ಪಂಚಲಿಂಗಗಳು ಮತ್ತು ೧೦೯ ಲಿಂಗಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಭಕ್ತರಾದ ಚುಮ್ಮಿ ದೇವಯ್ಯ ಮಾತನಾಡಿ, ಪ್ರತಿವರ್ಷವೂ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಭಕ್ತರಾದ ದೇವರಾಜ್ ಹಾಜರಿದ್ದರು.