ಮತದಾನದ ಅರಿವುಂಟು ಮಾಡಲು ವಿವಿಧ ಕಾರ್ಯಕ್ರಮ

16adarshkdga5
Published on

ಮಡಿಕೇರಿ: ಮತದಾನದ ಮಹತ್ವ ಮತ್ತು ಮತದಾನ ಮಾಡಿ ಎಂಬ ಜಾಗೃತಿ ಸಂದೇಶದ ಬೈಕ್ ಜಾಥಾ ಮಡಿಕೇರಿಯಲ್ಲಿ ಜನಮನ ಸೆಳೆಯಿತು.


ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ವತಿಯಿಂದ(ಸ್ವೀಪ್) ಮತ್ತು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಬೈಕ್ ಜಾಥಾಕ್ಕೆ ನಗರದ ಬನ್ನಿಮಂಟಪದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.


ಜಿಲ್ಲಾಧಿಕಾರಿ ಸತೀಶ್‌ರವರ ಪತ್ನಿ ರೂಪಶ್ರೀ ಅವರೊಂದಿಗೆ ಬೈಕ್ ಜಾಥಾದಲ್ಲಿ ಪಾಲ್ಗೊಂಡರೆ, ಜಿ.ಪಂ.ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಬುಲೆಟ್ ಬೈಕ್‌ನಲ್ಲಿ ಬಂದು ಗಮನ ಸೆಳೆದರು.


ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕಾಗಿ ಸಾಗಿದ ಬೈಕ್ ಜಾಥಾ ರಾಜಾಸೀಟು ಉದ್ಯಾನವನದಲ್ಲಿ ಕೊನೆಗೊಂಡಿತು.


ರಾಜಾಸೀಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಮತದಾನ ಪ್ರತೀಯೊಬ್ಬರ ಹಕ್ಕಾಗಿದೆ. ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಲು ಪ್ರೋತ್ಸಾಹ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ೧೮ ವರ್ಷ ತುಂಬಿದ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕ, ಯುವತಿಯರಿಗೆ ಮತದಾನ ಮಾಡಿದ ಬಳಿಕ ಮೊಬೈಲ್ ಸೆಲ್ಫಿ ಸ್ಪರ್ಧೆಯನ್ನು ಮತಗಟ್ಟೆಯ ಹೊರ ಆವರಣದಲ್ಲಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಸಖಿ ಬೂತ್, ಯಂಗ್ ಬೂತ್‌ಗಳು ಕೂಡ ಈ ಬಾರಿಯ ವಿಶೇಷವಾಗಿದೆ ಎಂದರು.


ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಾತನಾಡಿ, ಮತದಾನದ ಜಾಗೃತಿ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಆಯೋಜಿತವಾಗಿದೆ. ಏ.೩೦ ರಂದು ಮಡಿಕೇರಿಯಲ್ಲಿ ಮತದಾನ ಮಹತ್ವ ಸಾರುವ ರಂಗೋಲಿ ಸ್ಪರ್ಧೆ ಮತ್ತು ಮೊಬೈಲ್ ಲೈಟ್‌ನಲ್ಲಿ ನಾನು ಮತಹಾಕುವೆ ಎಂಬ ಅಭಿಯಾನವೂ ವಿಭಿನ್ನವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.


ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ಬಡವರ್ಗದವರು ತಮ್ಮ ಹಕ್ಕು ಚಲಾಯಿಸಲು ಸಂಭ್ರಮದಿಂದ ಮತಗಟ್ಟೆಗೆ ಬರುತ್ತಾರೆ. ಆದರೆ. ಶ್ರೀಮಂತ ವರ್ಗದ ಅನೇಕರು ಮತದಾನದ ಬಗ್ಗೆ ನಿರಾಸಕ್ತಿ ತೋರುವ ಬೆಳವಣಿಗೆ ಸರಿಯಲ್ಲ ಎಂದು ಹೇಳಿದರು.


ಕೊಡಗು ಜಿಲ್ಲಾ ಮತದಾನದ ರಾಯಭಾರಿ ಕೆ.ರವಿಮುತ್ತಪ್ಪ, ಚುನಾವಣಾ ರಾಯಭಾರಿ ವಿಶೇಷ ಚೇತನ ಮಹಿಳೆ ಎಸ್.ಕೆ.ಈಶ್ವರಿ, ದಿಶ ಪೌಂಡೇಶನ್ ನ ಅಜಯ್ ಸೂದ್ ಮಾತನಾಡಿದರು.


ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್‌ನ ಜಂಟಿ ಕಾರ್ಯದರ್ಶಿ ವಿನಾಯಕ್ ಎಸ್.ಎ.ತೇಜರಾಜ್, ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ವಿವೇಕಾನಂದ ಯೂತ್ ಮೂವ್‌ಮೆಂಟ್ ನಿರ್ದೇಶಕ ಡಾ.ಪ್ರಶಾಂತ್, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಹಾಜರಿದ್ದರು. ರಾಜಾಸೀಟ್‌ನಲ್ಲಿ ನಾನು ಮತದಾನ ಮಾಡುತ್ತೇನೆ ಎಂಬ ಘೋಷಣೆಯನ್ನೂ ಕೂಗಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net