

ಈ ಹಿಂದೆ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ ನೆನಪಿನಲ್ಲಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾ ಒಕ್ಕೂಟದ ಮೈಸೂರು ವಿಭಾಗದ ವತಿಯಿಂದ ನಗರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಕಲ್ಯಾಣ್‌ಕುಮಾರ್ ತಿಳಿಸಿದರು.
ಒಕ್ಕೂಟದ ವತಿಯಿಂದ ಜು. 31ರವರೆಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಅಂಗವಾಗಿ ಕೆ.ಆರ್.ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳ ವಿತರಣೆ, ಗಿಡ ನೆಡುವ ಚಟುವಟಿಕೆಗಳಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬ್ಯಾಂಕ್‌ಗಳ ರಾಷ್ಟ್ರೀಕರಣದ ಬಳಿಕ ಹಿಂದುಳಿದ, ಕೆಳ ವರ್ಗದ ಜನತೆಗೆ ಸಾಕಷ್ಟು ಅನುಕೂಲಗಳಾಗಿವೆ. ಲಕ್ಷಾಂತರ ನಾಗರಿಕರ ಅಗತ್ಯಗಳಿಗೆ ತಕ್ಕ ಸೇವೆ ಒದಗಿಸಲಾಗುತ್ತಿದೆ. ಆದರೆ, ಇದೇ ವೇಳೆ ಜನತೆ ಸಹ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮೇಲೆ ಖಾಸಗೀಕರಣದಿಂದ ಆಗುವ ಪರಿಣಾಮಗಳ ಬಗ್ಗೆ ಅರಿತು ಇದರ ವಿರುದ್ಧ ಧ್ವನಿ ಎತ್ತಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಹೇಶ್ ಹಾಗೂ ಭರತ್ ಹಾಜರಿದ್ದರು.