

ಹುಬ್ಬಳ್ಳಿ : ಅಹಿಂಸೆಯ ಅಗ್ರ ಪ್ರತಿಪಾದಕ 24ನೇ ತೀರ್ಥಂಕರರಾದ ಭಗವಾನ ಮಹಾವೀರರ ಜನ್ಮಕಲ್ಯಾಣ ಜಯಂತಿ ಮಹೋತ್ಸವವನ್ನು ಹುಬ್ಬಳ್ಳಿ ದಿಗಂಬರ ಜೈನ ಸಮಾಜ ಅದ್ದೂರಿಯಿಂದ ಆಚರಿಸಲು ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಏ. 6 ರಿಂದ 10ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜನಕಲ್ಯಾಣ ಕಾರ್ಯಕ್ರಮಗಳ ಅಂಗವಾಗಿ 6ರಂದು ಬೆಳಗ್ಗೆ 11 ರಿಂದ ಶಾಂತಿನಾಥ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶಾಂತಿನಾಥ ಮಹಿಳಾ ಸಮಾಜ, ಜೈನ ಮಿಲನ್ ಹಾಗೂ ಪದ್ಮಾವತಿ ಮಹಿಳಾ ಮಂಡಳಗಳ ಸಹಯೋಗದೊಂದಿಗೆ ಏರ್ಪಡಿಸಿದೆ.
ಸಾಮಾನ್ಯ ಆರೋಗ್ಯ ಪರೀಕ್ಷೆ, ನೇತ್ರ ತಪಾಸಣೆ, ಚರ್ಮರೋಗ, ಸ್ತ್ರೀ ರೋಗ, ನರರೋಗ ತಪಾಸಣೆಗಳನ್ನು ತಜ್ಞ ವೈದ್ಯರು ಮಾಡುವರು. ಇದೇ ಸಂದರ್ಭದಲ್ಲಿ ರಾಷ್ಟ್ರೊತ್ಥಾನ ರಕ್ತಕೇಂದ್ರದಿಂದ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ಏ. 7 ರಂದು ಪೂಜೆ, ಪ್ರಾರ್ಥನೆಗಳು ನಡೆಯುವವು. 8ರಂದು ಬೆಳಗ್ಗೆ 11 ರಿಂದ ಶಾಂತಿನಾಥ ಭವನದಿಂದ ಸ್ಕೇಟಿಂಗ್ ಮೇಲೆ ಜೈನ ಧ್ವಜ ರ್ಯಾಲಿ ಪ್ರಮುಖ ಬೀದಿಗಳಲ್ಲಿ ನಡೆಯುವುದು.
9 ರಂದು ಜಿತೋ ಆಯೋಜನೆಯಲ್ಲಿ ಬೆಳಗ್ಗೆ 8 ಗಂಟೆಗೆ ಶ್ರೀನಿವಾಸ ಗಾರ್ಡನ್ ನಲ್ಲಿ "ವಿಶ್ವ ಣಮೋಕಾರ ದಿವಸ" ಸಾಮೂಹಿಕ ವಿಶ್ವಶಾಂತಿ ಪ್ರಾರ್ಥನೆ ಆಯೋಜಿಸಲಾಗಿದೆ. ಸಂಜೆ 5.30ಕ್ಕೆ ಶಾಂತಿನಾಥ ಭವನದಲ್ಲಿ ನಡೆಯುವ ಧರ್ಮ ಸಭೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಉದ್ಘಾಟಿಸುವರು. ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅತಿಥಿಯಾಗಿ ಪಾಲ್ಗೊಳ್ಳುವರು. ಧಾರವಾಡ ಜಿಲ್ಲಾ ಕಸಾಪ ಗೌರವ ಕಾರ್ಯದಶಿರ್ ಪ್ರೊ. ಕೆ.ಎಸ್. ಕೌಜಲಗಿ ಪ್ರಧಾನ ಉಪನ್ಯಾಸ ನೀಡುವರು. ಜೈನ ಸಮಾಜ ಅಧ್ಯಕ್ಷ ರಾಜೇಂದ್ರ ಬೀಳಗಿ ಅಧ್ಯಕ್ಷತೆ ವಹಿಸುವರು.
ಏ. 10 ರಂದು ಮಹಾವೀರ ಜಯಂತಿ ದಿನದಂದು ಬೆಳಗ್ಗೆ 6 ಗಂಟೆಗೆ ನಗರದ ಎಲ್ಲ ಬಸದಿಗಳಲ್ಲಿ ವಿಶೇಷ ಪೂಜೆ, ಶಾಂತಿಪಾಠ, ನಾಮಕರಣೋತ್ಸವ ನಂತರ ಹಳೇಹುಬ್ಬಳ್ಳಿಯ ಪ್ರಾಚಿನ ಶ್ರೀ ಆನಂತನಾಥ ಬಸದಿಯಲ್ಲಿ ಧರ್ಮಧ್ವಜಾರೋಹಣ ಹಾಗೂ ಅಲ್ಲಿಂದಲೇ ಬೆಳಗ್ಗೆ 8 ಗಂಟೆಗೆ ಜಿನಬಿಂಬ ಮತ್ತು ಭಾವಚಿತ್ರ ಸಹಿತ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
ಮೆರವಣಿಗೆಯ ನಂತರ ಮಧ್ಯಾಹ್ನ 1 ಗಂಟೆಗೆ ಶಾಂತಿನಾಥ ಭವನದಲ್ಲಿ ಶಾಂತಿನಾಥ ಮಹಿಳಾ ಸಮಾಜದ ವತಿಯಿಂದ ಮಹಾವೀರ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯುವುದು.
ಅಂದು ಸಂಜೆ 6 ಗಂಟೆಗೆ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ದಾನಿಗಳ ಸನ್ಮಾನ ಸಮಾರಂಭ ಆಯೋಜಿಸಿದ್ದು, ಡಿಸಿಪಿ ರವಿ ಚಿಕ್ಕನಾಯಕನಹಳ್ಳಿ ಅತಿಥಿಯಾಗಿ ಪಾಲ್ಗೊಳ್ಳುವರು.