

ಹಾಸನ: ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ವತಿಯಿಂದ ಹನುಮ ಜಯಂತಿ ಅಂಗವಾಗಿ ಜ.22ರಿಂದ 25 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಅನೂಪ್ ತಿಳಿಸಿದರು.
ವಿಶ್ವ ಹಿಂದು ಪರಿಷತ್ ಕಳೆದ ಹಲವು ವರ್ಷಗಳಿಂದ ಹಿಂದುಗಳ ರಕ್ಷಣೆ ಹಾಗೂ ಅವರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡಿಕೊಂಡು ಬಂದಿದೆ. ಜೊತೆಗೆ ಪ್ರತಿ ವರ್ಷ ಹನುಮ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದು, ಈ ವರ್ಷವೂ ಅದೇ ರೀತಿಯ ವಿಜೃಂಭಣೆಯ ಉತ್ಸವ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಠ ಮಂದಿರಗಳ ಪ್ರಮುಖ್ ರಕ್ಷಿತ್ ಭಾರದ್ವಾಜ್ ಮಾತನಾಡಿ, ಜ.22 ಬುಧವಾರ ಬೆಳಿಗ್ಗೆ 9 ಗಂಟೆಗೆ ನಗರದ ಶ್ರೀ ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ರಾಮ ತಾರಕ ಹೋಮ ನಡೆಯಲಿದ್ದು, ಬೆಳಿಗ್ಗೆ 11.45ಕ್ಕೆ ಪೂರ್ಣಾಹುತಿ ನೆರವೇರಲಿದೆ. ಜ. 23 ಗುರುವಾರ ಸಂಜೆ 4.30 ಗಂಟೆಗೆ ಕುವೆಂಪು ನಗರದ ಪಂಚಮುಖಿ ಗಣಪತಿ ದೇವಸ್ಥಾನದಿಂದ ಹನುಮ ಸಂಕೀರ್ತನಾ ಯಾತ್ರೆ, ಜ. 24 ರ ಶುಕ್ರವಾರ ತಣ್ಣೀರುಹಳ್ಳ ಮಠದಿಂದ ಸಂಜೆ 4ಗಂಟೆಗೆ ಬೃಹತ್ ಬೈಕ್ ಜಾಥಾ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜ.25 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಮಹಾವೀರ ವೃತ್ತದಿಂದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಶೋಭಾಯಾತ್ರೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಲಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಸಾದ್, ಪುಷ್ಪಾವತಿ, ಯಶವಂತ್, ಶಶಾಂಕ್, ಪ್ರಣವ್ ಇತರರು ಉಪಸ್ಥಿತರಿದ್ದರು.