

ಮಡಿಕೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್‌ರವರ ೧೩೩ನೇ ಜನ್ಮ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಅಶುಚಿತ್ವ ಎದ್ದು ಕಾಣುತ್ತಿದೆ. ಪರಿಣಾಮ, ಶುಚಿತ್ವದಲ್ಲಿ ಮಡಿಕೇರಿ ನಗರಸಭೆ ರಾಜ್ಯದಲ್ಲಿ ೧೪ನೇ ಸ್ಥಾನ ಪಡೆದಿದೆ. ಈ ಹಿಂದೆ ೧೧ನೇ ಸ್ಥಾನ ಪಡೆದಿತ್ತು. ಈ ಹಿನ್ನೆಲೆ ಸಮಿತಿ ವತಿಯಿಂದ ಜೂ.೨೩ರಂದು ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ೭.೩೦ ಗಂಟೆಯಿಂದ ೧೦ ಗಂಟೆಯವರೆಗೆ ನಗರದ ಮೈಸೂರು ರಸ್ತೆ ಸ್ವಾಗತ ಧ್ವಾರದಿಂದ ಸುದರ್ಶನ ವೃತ್ತದವರೆಗೆ ಶ್ರಮದಾನ ಮಾಡಲಾಗುವುದು. ಕಾರ್ಯಕ್ರಮಕ್ಕೆ ಅಶೋಕ್‌ಪುರ ಟೀಂ೧೪ ಸಂಘದ ಪದಾಧಿಕಾರಿಗಳು ಸಹಕಾರ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ನಗರದ ೨೩ ವಾರ್ಡ್‌ಗಳು ಸ್ವಚ್ಛತೆಯಲ್ಲಿ ಹಿಂದುಳಿದಿದೆ. ಜತೆಗೆ ನಗರಸಭೆಯಲ್ಲಿ ಪೌರಕಾರ್ಮಿಕರ ಸಂಖ್ಯೆಯೂ ಕ್ಷೀಣಿಸಿದೆ. ಇಡೀ ವಾರ್ಡ್‌ಗಳ ಶುಚಿತ್ವದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಪ್ರತಿ ೧೫ ದಿನಕ್ಕೊಮ್ಮೆ ನಗರದಲ್ಲಿ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಲ್ಲದೇ, ಇದೇ ಸಂದರ್ಭದಲ್ಲಿ ವಾರ್ಡ್‌ಗಳಲ್ಲಿ ಸಮಸ್ಯೆಗಳಿದ್ದಲ್ಲಿ ಸಮಿತಿ ವತಿಯಿಂದ ಆಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಜೂ.೨೮ರಂದು ಬಟ್ಟೆ ವಿತರಣೆ: ವೃದ್ಧಾಶ್ರಮದಲ್ಲಿರುವವರಿಗೆ ಸಮಿತಿ ವತಿಯಿಂದ ಬಟ್ಟೆ ವಿತರಣೆ ಕಾರ್ಯಕ್ರಮ ಜೂ.೨೮ರಂದು ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿರುವ ಸ್ತ್ರೀ ಶಕ್ತಿ ಮತ್ತು ವಿಕಾಸ್ ವೃದ್ಧಾಶ್ರಮದ ತಂದೆತಾಯಿಯರಿಗೆ ಸುಮಾರು ೬೦-೭೦ ಬಟ್ಟೆಗಳನ್ನು ವಿತರಿಸಲಾಗುವುದು. ಇದೇ ಸಂದರ್ಭ ನಗರಸಭೆಯ ಸುಮಾರು ೭೦ ಪೌರಕಾರ್ಮಿಕರಿಗೆ ಸ್ವೆಟರ್ ವಿತರಿಸಲಾಗುವುದು. ಅಂದು ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ.ನವೀನ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ನಗರಸಭೆ ಪೌರಾಯುಕ್ತ ವಿಜಯ್, ಸಮಾಜ ಸೇವಕ ಪ್ರದೀಪ್ ಕರ್ಕೆರ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಭಾಗ ಸಂಚಾಲಕ ಎನ್.ವೀರಭದ್ರಯ್ಯ, ನಗರ ಸಂಚಾಲಕ ಎಚ್.ಎ.ರವಿಕುಮಾರ್, ಸಂಘಟನಾ ಸಂಚಾಲಕ ವೇಣು ಕಿಶೋರ್, ಗ್ರಾಮ ಸಂಚಾಲಕ ಪ್ರಸಾದ್, ಸಹ ಸಂಚಾಲಕ ಶರವಣ ಉಪಸ್ಥಿತರಿದ್ದರು.