

ಬೀಳಗಿ: ಶಿಕ್ಷಣ ಪ್ರೇಮಿ, ಸಹಕಾರಿ ಧುರೀಣ, ಮಾಜಿ ಸಚಿವ ಎಸ್.ಆರ್. ಪಾಟೀಲರ 75ನೇ ಜನ್ಮದಿನ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ನಿಮಿತ್ತ ಜು.31 ರಂದು ಬಾಡಗಂಡಿ ಎಸ್.ಆರ್. ಪಾಟೀಲ ಶಿಕ್ಷಣ ಸಂಸ್ಥೆಯ ಆರೋಗ್ಯ ಧಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಕೃಷಿ ಗೋಷ್ಠಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿ ವಿವೇಕಾನಂದ ಸಂಸ್ಥೆ ಸಂಸ್ಥಾಪಕ ಕಾರ್ಯಾಧ್ಯಕ್ಷ ಎಂ.ಎನ್. ಪಾಟೀಲ ಹೇಳಿದರು.
ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ, ಬೀಳಗಿ ಸಕ್ಕರೆ ಕಾರ್ಖಾನೆ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಹಾಗೂ ಬಾಪೂಜಿ ಸೌಹಾರ್ದ ಸಹಕಾರಿ ನಿಯಮಿತ ಮತ್ತು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆ , ಎನ್‌ಎಸ್‌ಪಿ ಡಿಸ್ಟ್ಟಿಲರೀಸ್ ಹಾಗೂ ಬಾಪೂಜಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತ ಬೀಳಗಿ ಇವರ ಸಹಯೋಗದಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಮೃತ ಮಹೋತ್ಸವ ಆಚರಿಸಲಾಗುತ್ತದೆ ಎಂದು ಬಾಡಗಂಡಿ ಎಸ್.ಆರ್. ಪಾಟೀಲ ಶಿಕ್ಷಣ ಸಂಸ್ಥೆ ಗೆಸ್ಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು.
ಮಾಜಿ ಸಚಿವ ಎಸ್.ಆರ್. ಪಾಟೀಲರ ಮಾತೋಶ್ರೀ ಈರಮ್ಮತಾಯಿ ರುದ್ರಗೌಡ ಪಾಟೀಲ ಅವರ ಸ್ಮರಣಾರ್ಥ ಅಬ್ಬೆ ಪ್ರಶಸ್ತಿಯನ್ನು ಹೆಸರಾಂತ ರೈತ ಮಹಿಳೆ ಕವಿತಾ ಮಿಶ್ರಾ ಅವರಿಗೆ ಹಾಗೂ ತಂದೆ ರುದ್ರಗೌಡ ಪಾಟೀಲರ ಸ್ಮರಣಾರ್ಥ ಕೃಷಿ ಪ್ರಶಸ್ತಿಯನ್ನು ರಾಜೇಂದ್ರ ಬಾಳಗಿ (ಅಂಬಿಗೇರ) ಅವರಿಗೆ ತಲಾ ಒಂದು ಲಕ್ಷ ರೂ.ನಗದು ಜತೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ತಪಾಸಣೆ ಶಿಬಿರದಲ್ಲಿ ವಿವಿಧ ಕಾಯಿಲೆಗಳನ್ನು ನಿವಾರಿಸುವ ತಜ್ಞ ವೈದ್ಯರು ಭಾಗವಹಿಸುವರು. ಪದ್ಮಶ್ರೀ ಮತ್ತು ಕೃಷಿ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಸಂಜೀವ ಮಾನೆ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ.ಬಾಗಲಕೋಟೆ, ವಿಜಯಪುರ ಅವಳಿ ಜಿಲ್ಲೆ ಸೇರಿ ವಿವಿಧ ಭಾಗದ ರೈತರ ಕಬ್ಬಿನ ಬೆಳೆಗೆ ಔಷಧ, ಗೊಬ್ಬರ ಸಿಂಪಡಿಸಲು ಡ್ರೋನ್ ಕೂಡ ಉದ್ಘಾಟಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಲ್.ಬಿ. ಕುರ್ತುಕೋಟಿ, ಉಪಾಧ್ಯಕ್ಷ ಸತ್ಯಪ್ಪ ಆರ್ . ಮೇಲ್ನಾಡ, ಎಸ್ ಸಿ ಮೋಟಗಿ. ಎಂ.ಎನ್. ಮುರಕಾಚೆಟ್ಟಿ. ಬಿ.ಪಿ ಪಾಟೀಲ, ಸಂತೋಷ ಜಂಬಗಿ ಇದ್ದರು.