

ಮಡಿಕೇರಿ: ಜಿಲ್ಲಾ ಬಿಜೆಪಿ ವತಿಯಿಂದ ಮಾ.೧೦ ರಿಂದ ಮಾ.೨೦ರವರೆಗೆ ಪಕ್ಷದ ವಿವಿಧ ಕಾರ್ಯಕ್ರಮ ಜಿಲ್ಲೆಯ ವಿವಿಧೆಡೆ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ೪ ಭಾಗಗಳಿಂದ ರಥಯಾತ್ರೆ ಹೊರಟಿದ್ದು, ೨೨೪ ವಿಧಾನ ಸಭಾ ಕ್ಷೇತ್ರಗಳಿಗೆ ರಥಯಾತ್ರೆ ಭೇಟಿ ನೀಡಲಿದೆ. ಕೊಡಗು ಜಿಲ್ಲೆಗೆ ಮಾ.೧೦ರಂದು ಆಗಮಿಸಲಿದ್ದು, ಅಂದು ಗೋಣಿಕೊಪ್ಪದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಮಡಿಕೇರಿಯಲ್ಲಿ ವಾಸ್ಥವ್ಯ ಹೂಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಾ.೧೧ರಂದು ಮಡಿಕೇರಿಯ ಚೌಡೇಶ್ವರಿ ದೇವಾಲದಿಂದ ತಿಮ್ಮಯ್ಯ ವೃತ್ತದವರೆಗೆ ರೋಡ್ ಶೋ ನಡೆಯಲಿದೆ. ಇದೇ ಸಂದರ್ಭ ಯಡಿಯೂರಪ್ಪರವರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಭಾಷಣ ಮಾಡಲಿದ್ದಾರೆ. ನಂತರ ಕ್ರಿಸ್ಟಲ್ ಕೋರ್ಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸೋಮವಾರಪೇಟೆ ಒಕ್ಕಲಿಗರ ಸಭಾ ಭವನದಲ್ಲಿ ಮಾ.೧೩ ರಂದು ಯುವಮೋರ್ಚಾ ಸಮಾವೇಶ ನಡೆಯಲಿದ್ದು, ಇಮದನ ಸಚಿವ ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ. ಮಾ.೧೪ರಂದು ಮೂರ್ನಾಡು ಕೊಡವ ಸಮಾಜದಲ್ಲಿ ರೈತ ಮೋರ್ಚಾ ಸಮಾವೇಶ ನಡೆಯಲಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ಭಾಗವಹಿಸಲಿದ್ದಾರೆ. ಮಾ.೧೫ ರಂದು ವಿರಾಜಪೇಟೆಯಲ್ಲಿ ಮಹಿಳಾ ಮೋರ್ಚಾ ಸಮಾವೇಶ ನಡೆಯಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆರವರು ಪಾಲ್ಗೊಳ್ಳಲಿದ್ದಾರೆ. ಮಾ.೧೬ ಕುಶಾಲನಗರದಲ್ಲಿ ಎಸ್.ಸಿ. ಮೋರ್ಚಾ ಸಮಾವೇಶ ನಡೆಯಲಿದ್ದು, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳರವರು ಪಾಲ್ಗೊಳ್ಳಲಿದ್ದಾರೆ. ಮಾ.೨೦ರಂದು ಎಸ್.ಟಿ.ಮೋರ್ಚಾ ಸಮಾವೇಶ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಾ.೧೮ ರಂದು ಗಾಂಧಿ ಮೈದಾನದಲ್ಲಿ ಫಲಾನುಭವಿಗಳ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ೧೦ ಸಾವಿರಕ್ಕೂ ಅಧಿಕ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ. ನಂತರ ಮದ್ಯಾಹ್ನ ೨.೩೦ಕ್ಕೆ ನಾಪೋಕ್ಲುವಿನಲ್ಲಿ ಆಯೋಜಿಸಿರುವ ಅಪ್ಪಚೆಟ್ಟೋಳಂಡ ಹಾಕಿ ಕಪ್‌ಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎನ್.ಎಂ.ರವಿ ಕಾಳಪ್ಪ, ವಕ್ತಾರ ಮಹೇಶ್ ಜೈನಿ, ನಗರಾಧ್ಯಕ್ಷ ಮನು ಮಂಜುನಾಥ, ಪ್ರಮುಖರಾದ ಮಾದಪ್ಪ, ರೂಪಾ ಸತೀಶ ಉಪಸ್ಥಿತರಿದ್ದರು.