

ಮಡಿಕೇರಿ: ವಿರಾಜಪೇಟೆ ಕೊಡವ ಸಮಾಜ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ೨೦೨೩ರ ಮಾರ್ಚ್ ತಿಂಗಳಾಂತ್ಯದಲ್ಲಿ ೩ ದಿನಗಳ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕುಂಬೆರ ಮನು ಕುಮಾರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ಕೊಡವ ಸಮಾಜ ೧೯೨೧ರಲ್ಲಿ ಸ್ಥಾಪನೆಯಾಗಿದ್ದು, ೧೦೦ ವರ್ಷಗಳ ಇತಿಹಾಸ ಹೊಂದಿದೆ. ೨೦೨೩ರ ಮಾರ್ಚ್ ಅಂತ್ಯಕ್ಕೆ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ೩ ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮೊದಲ ದಿನ ಕೊಡವ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ನಡೆಯಲಿದೆ. ಎರಡನೇ ದಿನ ಕೊಡವ ಸಮಾಜಗಳ ನಡುವೆ ಹಾಕಿ ಪಂದ್ಯಾಟ, ಹಗ್ಗಜಗ್ಗಾಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮೂರನೇ ದಿನ ಬೃಹತ್ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ನಿರ್ದೇಶಕರಾದ ಸಚಿನ್ ಕುಟ್ಟಯ್ಯ, ಅನಿಲ್ ಮಂದಣ್ಣ, ಮನು ರಾಮಚಂದ್ರ ಉಪಸ್ಥಿತರಿದ್ದರು.