

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಬಿಜೆಪಿ ಮೈಸೂರು ನಗರ ಘಟಕದಿಂದ ಸೆ.17 ರಿಂದು ಅ.2 ರವರೆಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಪಕ್ಷದ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ತಿಳಿಸಿದರು.
ವಿಶ್ವದ ನಾಯಕರಾಗಿ ಗಮನ ಸೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯನ್ನು ಹಲವು ಸೇವಾ ಚಟುವಟಿಕೆ ನಡೆಸಿ, ಜನರಿಗೆ ಅದರಿಂದ ಉಪಯೋಗವಾಗುವಂತೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
17 ರಂದು ಪಕ್ಷದ ವೈದ್ಯಕೀಯ ಪ್ರಕೋಷ್ಠದಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ನಗರದ ಹಲವೆಡೆ ಆಯೋಜಿಸಲಾಗುತ್ತಿದೆ. ತಜ್ಞ ವೈದ್ಯರು, ಸಿಬ್ಬಂದಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿ, ಸೂಕ್ತ ಔಷಧ, ಸಲಹೆಗಳನ್ನು ನೀಡಲಿದ್ದಾರೆ. ಜೀವ ರಕ್ಷಕ ಅಭಿಯಾನ ನಡೆಸಲಾಗುವುದು. ಇದರಲ್ಲಿ ನಗರದಲ್ಲಿ ಯಾರು ಕೋವಿಡ್ ಮೂರನೇ ಡೋಸ್ ಲಸಿಕೆಯನ್ನು ಪಡೆದಿಲ್ಲವೋ, ಅಂತಹವರನ್ನು ಲಸಿಕಾ ಕೇಂದ್ರಗಳಿಗೆ ಕರೆತಂದು ಲಸಿಕೆ ಕೊಡಿಸಲಾಗುವುದು ಎಂದರು.
ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ರಕ್ತದ ಕೊರತೆ ಹೆಚ್ಚಾಗುತ್ತಿರುವುದನ್ನು ಮನಗಂಡು ಬಿಜೆಪಿ ಯುವ ಮೋರ್ಚಾದಿಂದ 17 ಹಾಗೂ 18 ರಂದು ಎರಡು ದಿನಗಳವರೆಗೆ ವಿವಿಧೆಡೆ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ. ಇದರಲ್ಲಿ ದಾನಿಗಳು, ಪಕ್ಷದ ಮುಖಂಡರು, ಬಿಜೆಪಿ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲಿದ್ದಾರೆ ಎಂದರು.
ಸೆ.20 ಹಾಗೂ 21 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯ ಪ್ರದರ್ಶನ ಆಯೋಜಿಸಲಾಗಿದೆ. ಸೆ.22 ಹಾಗೂ 23 ರಂದು ಬಿಜೆಪಿ ನಗರ ಒಬಿಸಿ ಮೋರ್ಚಾ ವತಿಯಿಂದ ಅರಳಿ ಮರ ನೆಡುವ ಅಭಿಯಾನ ನಡೆಸಲಾಗುವುದು. ಅಲ್ಲದೆ ಮನೆ ಮನೆಗೆ ತೆರಳಿ ಸಸಿಗಳನ್ನು ವಿತರಿಸಲಾಗುವುದು. 24 ಹಾಗೂ 25 ರಂದು ಕಮಲೋತ್ಸವ ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು. 24 ರಿಂದ 26 ರವರೆಗೆ ಮೈಸೂರು ಮಹಾರಾಜರ ಕೊಡುಗೆಗಳ ಕುರಿತ ಚಿತ್ರಪ್ರದರ್ಶನ ಆಯೋಜಿಸಲಾಗುತ್ತದೆ ಎಂದರು.
26 ಹಾಗೂ 27 ರಂದು ರೈತ ಮೋರ್ಚಾದಿಂದ ರೈತರಿಗೆ ಅನುಕೂಲವಾಗುವ ಅಮೃತ ಸರೋವರ ಕಾರ್ಯಕ್ರಮ ನಡೆಸಲಾಗುವುದು. 25 ರಿಂದ 29ರ ತನಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಭೆ ಹಾಗೂ ಫಲಾನುಭವಿಗಳ ನೋಂದಣಿ ಅಭಿಯಾನವನ್ನು ಬಿಜೆಪಿ ನಗರ ಫಲಾನುಭವಿಗಳ ಪ್ರಕೋಷ್ಠದಿಂದ ನಡೆಸಲಾಗುವುದು. 28 ಹಾಗೂ 29 ರಂದು ನಗರ ಮಹಿಳಾ ಮೋರ್ಚಾದಿಂದ ಅಂಗನವಾಡಿ ಸೇವಾ ದಿವಸ ಆಚರಿಸಲಾಗುವುದು. 30 ರಂದು ನಗರ ಎಸ್ಟಿ ಮೋರ್ಚಾದಿಂದ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.
30 ರಂದು ಕ್ಷಯ ರೋಗ ನಿರ್ಮೂಲನಾ ಅಭಿಯಾನ ನಡೆಸಲಾಗುವುದು. ಕ್ಷಯ ರೋಗಿಗಳನ್ನು ಗುರುತಿಸುವುದು, ಅವರಿಗೆ ಸೂಕ್ತ ಚಿಕಿತ್ಸೆ, ಪೌಷ್ಟಿಕ ಆಹಾರ ದೊರೆಯುವಂತೆ ಮಾಡಿ, ಅವರನ್ನು ರೋಗದಿಂದ ಮುಕ್ತರಾಗುವಂತೆ ಮಾಡಲಾಗುವುದು ಎಂದು ಹೇಳಿದರು. ಅ.2 ರಂದು ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನ, ಖಾದಿ ಉತ್ಸವವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಶಾಸಕ ಎಸ್.ಎ.ರಾಮದಾಸ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ.ಗಿರಿಧರ್, ವಾಣೀಶ್‌ಕುಮಾರ್, ಸೋಮಸುಂದರ್, ಮುಖಂಡ ಅಚ್ಯುತರಾವ್ ಇದ್ದರು.