ಜನ ಸ್ಪಂದನಾದಲ್ಲಿ ನಾನಾ ಸಮಸ್ಯೆಗಳು ಅನಾವರಣ: ಅಹವಾಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

15
Published on

ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ನಾನಾ ಸಮಸ್ಯೆಗಳು ಅನಾವರಣಗೊಂಡವು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ದೂರದೂರುಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ದುಃಖ, ದುಮ್ಮಾನಗಳನ್ನು ತೋಡಿಕೊಂಡರು. ಕೆಲ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರೆ, ಕೆಲವು ಅರ್ಜಿಗಳಿಗೆ ಅಗತ್ಯ ಕ್ರಮದ ಭರವಸೆ ನೀಡಲಾಯಿತು.

ಕ್ರಯಪತ್ರ, ಪೌತಿ ಖಾತೆ, ಸ್ಮಶಾನಕ್ಕೆ ಜಾಗ, ಕುಡಿಯುವ ನೀರು, ರಸ್ತೆ, ಆಶ್ರಯ ನಿವೇಶನಕ್ಕೆ ಸಂಬಂಧಿಸಿದಂತೆ ಎಚ್.ಡಿ.ಕೋಟೆಯಿಂದ ಬಂದಿದ್ದ ಜನರಿಂದ ಹೆಚ್ಚಿನ ದೂರುಗಳು ಸಲ್ಲಿಕೆಯಾದವು.

ಎಚ್.ಡಿ.ಕೋಟೆ ತಾಲೂಕಿನ ಜಕ್ಕಹಳ್ಳಿ ಗ್ರಾಪಂ ಸದಸ್ಯ ಸಿ.ಶಿವಣ್ಣ ಅವರು, ಸರ್ಕಾರಿ ಶಾಲೆಯ ಗೇಟ್ ದುರಸ್ತಿಪಡಿಸಿ. ಟ್ಯಾಂಕ್‌ನಲ್ಲಿ ಕಲುಷಿತ ನೀರು ಶೇಖರಣೆ ಮಾಡಲಾಗುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕು, ಅಂಗನವಾಡಿ ಆವರಣ ಶುದ್ಧಗೊಳಿಸಬೇಕು. ಗ್ರಾಮದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವ ಮಾನದಂಡದಲ್ಲಿ ಗ್ರಾ.ಪಂ.ಗೆ ಗಾಂಧಿ ಪುರಸ್ಕಾರ ಕೊಡಲಾಗಿದೆಯೋ ಗೊತ್ತಿಲ್ಲ ಗಮನಸೆಳೆದರು.

ಹೆಗ್ಗಡಪುರದ ಕೆಂಪಶೆಟ್ಟಿ ಮಾತನಾಡಿ, ನಮ್ಮೂರಿನಲ್ಲಿ 40 ಎಕರೆ ಜಮೀನಿಗೆ ವಾರಸುದಾರರಿಲ್ಲ. ಭೂ ಪರಿವರ್ತನೆಗೆ ಆದೇಶ ಆಗಿದೆ. 100 ಕೋಟಿ ರೂ. ಮೌಲ್ಯದ ಈ ಜಾಗದಲ್ಲಿ ಬಡವರಿಗೆ ನಿವೇಶನ ಹಂಚುವಂತೆ ಮನವಿ ಮಾಡಿದರು.

ಹಂಪಾಪುರ ಹೋಬಳಿ ಜಿ.ಪಿ.ಸರಗೂರು ಗ್ರಾಮದಲ್ಲಿ ಮೂರು ಎಕರೆ ಜಮೀನಿನಲ್ಲಿ ಅಕ್ರಮವಾಗಿ ಸಾಗುವಳಿ ಮಾಡಲಾಗಿದೆ. ಅಮಾಯಕರಿಗೆ ತೊಂದರೆ ಕೊಡುತ್ತಿದ್ದು, ಭೂ ಮಾಫಿಯಾ ಸದ್ದು ಮಾಡುತ್ತಿದೆ. ಪ್ರಕರಣ ಕುರಿತು ಬಿ ರಿಪೋರ್ಟ್ ಹಾಕಿದವರನ್ನು ಅಮಾನತು ಮಾಡಬೇಕೆಂದು ಗ್ರಾಮಸ್ಥರು ಸಚಿವರನ್ನು ಒತ್ತಾಯಿಸಿದರು. ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಸಚಿವರು ಆದೇಶಿಸಿದರು.

ಎಚ್.ಡಿ.ಕೋಟೆ ತಾಲೂಕಿನ ಕೆಂಚನಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿ, ಕಬಿನಿ ಜಲಾಶಯ ನಿರ್ಮಾಣದಿಂದ ಮುಳುಗಡೆಯಾದ ಗ್ರಾಮಗಳ ಜನರಿಗೆ ಪರಿಹಾರ ಕೊಡಲು ಇನ್ನೆಷ್ಟು ವರ್ಷಗಳು ಬೇಕು? ನಮ್ಮ ಮಕ್ಕಳನ್ನು ಓದಿಸಬಾರದೇ? ಎಂದು ಖಾರವಾಗಿ ತಮ್ಮ ಸಮಸ್ಯೆ ಆಕ್ರೋಶ ಹೊರ ಹಾಕಿದರು. ಇದನ್ನು ಪರಿಶೀಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸಾಲಿಗ್ರಾಮ ತಾಲೂಕಿನ ನಾಚನಹಳ್ಳಿ ಗ್ರಾಮದಲ್ಲಿ 29/4ರಲ್ಲಿ 2 ಎಕರೆ 2 ಗುಂಟೆ ಜಾಗವನ್ನು ಬೇರೆಯವರ ಹೆಸರಿಗೆ ದಾಖಲೆ ಮಾಡಿದ್ದಾರೆ ಎಂದು ಜಗದೀಶ್ ಅಸಮಾಧಾನ ವ್ಯಕ್ತಪಡಿಸಿದರು. ಉಪವಿಭಾಗಾಧಿಕಾರಿ ಬಳಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸಲಹೆ ನೀಡಿದರು. ಆಗ ಅವರು ನಮ್ಮ ಜಮೀನಿಗೆ ನಾವೇ ಅಪೀಲು ಹಾಕಬೇಕೇ?ಎಂದು ಬೇಸರ ವ್ಯಕ್ತಪಡಿಸಿದರು.

ಜೆ.ಪಿ.ನಗರದ ನಂಜೇರಾಜ ಅರಸ್ ಅವರು, 1.50 ಲಕ್ಷ ರೂ. ಕುಡಿಯುವ ನೀರಿನ ಬಿಲ್ ಬಂದಿದೆ. ಇದನ್ನು ಪರಿಶೀಲಿಸುವಂತೆ ಕೋರಿದಾಗ ನಗರಪಾಲಿಕೆ ಆಯುಕ್ತ ಶೇಖ್ ಆಸೀಫ್ ತನ್ವಿರ್ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ಎಚ್.ಡಿ.ಕೋಟೆ ತಾಲೂಕಿನ ಎನ್.ಬೇಗೂರು ಗ್ರಾಮದ ನರಸಿಂಹಮೂರ್ತಿ ಅವರು ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಲಿರುವ ಮಹದೇವಪ್ಪ ಎಂದು ಹೊಗಳಿದಾಗ, ಗ್ಯಾರಂಟಿ ಸಿಎಂ ಆಗುತ್ತೇನಾ? ಎಂದ ಮಹದೇವಪ್ಪ ಮರು ಪ್ರಶ್ನಿಸುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

ಈ ಸಲ 200ಕ್ಕಿಂತ ಅಧಿಕ ಜನರ ಅಹವಾಲು ಸ್ವೀಕರಿಸಲಾಯಿತು. ಕಳೆದ ಬಾರಿ 113 ಅರ್ಜಿಗಳು ಬಂದಿದ್ದವು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸಭೆಯ ಗಮನಕ್ಕೆ ತಂದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್.ವಿಷ್ಣುವರ್ಧನ್ ಇತರರು ಇದ್ದರು.

ಪರಿಹಾರದ ಬಗ್ಗೆ ಜನರಿಗೆ ತಿಳಿಸಿ

ಮೈಸೂರು ಕಳೆದ ಬಾರಿ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದಿದ್ದ ಮನವಿಗಳಲ್ಲಿ ಎಷ್ಟನ್ನು ಪರಿಹರಿಸಲಾಗಿದೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಕಾನೂನು ತೊಡಕು ಇರುವ ಅರ್ಜಿಗಳ ಬಗ್ಗೆಯೂ ಅರ್ಜಿದಾರರಿಗೆ ಮಾಹಿತಿ ನೀಡಬೇಕು. ಜನರಿಗೆ ಪಾರದರ್ಶಕ ಆಡಳಿತದ ಬಗ್ಗೆ ಮಾಹಿತಿ ನೀಡಬೇಕು. ಜನರ ಸಮಸ್ಯೆಗಳನ್ನು ಪರಿಹರಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ಯಾವ ಇಲಾಖೆಗಳಲ್ಲಿ ಏನೇನು ಸಮಸ್ಯೆಗಳಿವೆ, ಎಷ್ಟು ಅರ್ಜಿಗಳು ಬಂದಿದೆ, ಎಷ್ಟು ಅರ್ಜಿಗಳಿಗೆ ಪರಿಹಾರ ಮಾಡಲಾಗಿದೆ, ಮಾಡದೆ ಇರುವಂತಹ ಅರ್ಜಿಗಳಿಗೆ ಏನು ಪರಿಹಾರ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅರ್ಜಿದಾರರು ತಿಳಿಸಿರುವ ಸಮಸ್ಯೆ ಪರಿಹರಿಸಲು ಆಡಳಿತ ಯಾವಾಗಲೂ ಜನರ ಜತೆಯೇ ಇರುತ್ತದೆ. ಪ್ರತಿ ಆರು ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಜನ ಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net