ಮೈಸೂರು: ಮಾಜಿ ಸಚಿವ, ಸಂಸದ ವಿ.ಶ್ರಿನಿವಾಸಪ್ರಸಾದ್ ಅವರ ನಿಧನಕ್ಕೆ ವಿವಿಧ ಸಂಘಟನೆಗಳು ಸಂತಾಪ ಸೂಚಿಸಿವೆ.
ಮೈಸೂರು ವಿಶ್ವವಿದ್ಯಾಲಯದ ದಲಿತ ನೌಕರರ ಸಂಘದಿಂದ ಸಂತಾಪ ಸಭೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಪ್ರೊ.ಜೆ.ಸೋಮಶೇಖರ್ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಶೋಧನ ಮತ್ತು ವಿಸ್ತರಣೆ ಕೇಂದ್ರದ ಸ್ಥಾಪನೆಗೆ ಪ್ರಸಾದ್ ಅವರ ಕೊಡುಗೆಯನ್ನು ಸ್ಮರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ಆರ್.ತಿಮ್ಮರಾಯಪ್ಪ ಸೇರಿದಂತೆ ಇತರರು ಇದ್ದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯ ಆರ್.ಧರ್ಮಸೇನಾ, ಎಐಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಆರ್.ಶೇಷಾದ್ರಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಕಾರ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ಚೌಡಹಳ್ಳಿ ಜವರಯ್ಯ ಇತರರು ತಮ್ಮ ಸಂತಾಪ ಸೂಚಿಸಿದ್ದಾರೆ.