

ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮದಲ್ಲಿ 2.54 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ‘ಕಲ್ಯಾಣ ಸಂಪದ’ ಕಟ್ಟಡವನ್ನು ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಾರ್ಪಣೆ ಮಾಡಿದರು.
ನಿಗದಿಯಂತೆ ಬೆಳಗ್ಗೆ 11.35ರ ವೇಳೆಗೆ ಸಿಂಧನೂರು ಮಾರ್ಗವಾಗಿ ಜವಳಗೇರಾ ಗ್ರಾಮಕ್ಕೆ ಆಗಮಿಸಿದ ನಿರ್ಮಲಾ ಅವರನ್ನು ಹೂ ಮಾಲೆ ಹಾಕಿ ಮಹಿಳಾ ಡೊಳ್ಳಿನ ತಂಡದವರಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ನಂತರ ಕೃಷಿ ಸಂಸ್ಕರಣಾ ಘಟಕ ಉದ್ಘಾಟಿಸಿ, ಕಂಪನ ಜರಡಿ ಯಂತ್ರ, ಜಿಲ್ಲಾ ಮಿಶ್ರಣ ಸಂಗ್ರಹಗಾರ, ಮಿಶ್ರಣ ಯಂತ್ರ, ಶುದ್ಧೀಕರಣ ಮತ್ತು ಗ್ರೈಂಡಿಂಗ್ ಯಂತ್ರ, ಬಣ್ಣ ಆಧಾರಿತ ಬೇರ್ಪಡಿಸುವ ಯಂತ್ರ, ಬೇಳೆ ಪ್ಯಾಕಿಂಗ್ ಯಂತ್ರ, ತಯಾರಾದ ವಸ್ತುಗಳ ಸಂಗ್ರಹಗಾರವನ್ನು ವೀಕ್ಷಿಸಿ ಅಧಿಕಾರಿಗಳು, ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಈ ವೇಳೆ ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ.ನಾಗರಾಜ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ., ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಎಸ್ಪಿ ಪುಟ್ಟಮಾದಯ್ಯ ಎಂ., ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಸ್ವಾಸ್ಥ್ಯ ರೈತರ ಉತ್ಪಾದಕ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ನಾಡಗೌಡ, ಸದಸ್ಯರಾದ ಚಂದ್ರಶೇಖರಗೌಡ, ಶಂಭನಗೌಡ ತಿಡಿಗೋಳ, ವೆಂಕಟೇಶ ನಂಜಲದಿನ್ನಿ, ವೀರಭದ್ರಗೌಡ ಸೋಮಲಾಪುರ, ಸೋಮನಗೌಡ, ವಿಜಯಲಕ್ಷ್ಮೀ, ಶ್ವೇತಾ, ಲಕ್ಷ್ಮೀಕಾಂತ ಪೋತ್ನಾಳ, ಜವಳಗೇರಾ ಗ್ರಾಪಂ ಅಧ್ಯಕ್ಷ ನಾಗಲಿಂಗ, ಯಮನೂರಪ್ಪ ಇತರರಿದ್ದರು.