

ಮಡಿಕೇರಿ: ಶಿವಯೋಗಿ ಸಿದ್ದರಾಮ ಮತ್ತು ಮಹಾಯೋಗಿ ವೇಮನ ಜಯಂತಿಯನ್ನು ಜ.೧೯ ರಂದು ನಗರದ ಭಾರತೀಯ ವಿದ್ಯಾಭವನದಲ್ಲಿ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡರವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಜ.೨೧ ರಂದು ಹಾರಂಗಿ ಅಥವಾ ಶಿರಂಗಾಲ ಗ್ರಾಮದಲ್ಲಿ ಆಯೋಜಿಸಲು ನಿರ್ಧರಿಸಲಾಯಿತು. ಫೆ.೧ ರಂದು ಆಯೋಜಿಸಬೇಕಿದ್ದ ಮಡಿವಾಳ ಮಾಚಿದೇವ ಜಯಂತಿ, ಫೆ.೧೧ ರಂದು ನಗರದ ದಾಸವಾಳ ರಸ್ತೆ ಬಳಿ ಇರುವ ವೀರಭದ್ರೇಶ್ವರ ದೇವಾಲಯದಲ್ಲಿ ಹಾಗೂ ಸವಿತಾ ಮಹರ್ಷಿ ಜಯಂತಿಯನ್ನು ಫೆ.೨೭ ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಸರ್ಕಾರದ ನಿಯಮದಂತೆ ಜಯಂತ್ಯೋತ್ಸವ ಆಯೋಜಿಸಬೇಕು. ಶಿಷ್ಟಚಾರವನ್ನು ಪಾಲಿಸಬೇಕು. ಜಯಂತ್ಯೋತ್ಸವ ಸಂಬಂಧ ಜಿಲ್ಲಾಡಳಿತದ ಜತೆ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ಮಡಿವಾಳ ಸಮಾಜದ ಪ್ರಮುಖರಾದ ಸುಕುಮಾರ್ ಮಾತನಾಡಿ, ಸಮಾಜದ ಪ್ರಮುಖರೆಲ್ಲರೂ ಫೆ.೧೧ ರಂದು ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಒಂದೆಡೆ ಸೇರುವುದರಿಂದ ಅಂದು ಕಾರ್ಯಕ್ರಮ ಆಯೋಜಿಸಲು ಅವಕಾಶ ಮಾಡಬೇಕು. ಜತೆಗೆ ಕಲಾತಂಡ ಕಳುಹಿಸಿಕೊಡುವಂತೆ ಕೋರಿದರು.
ಸವಿತಾ ಸಮಾಜದ ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಟಿ.ಮಧು ಮಾತನಾಡಿ, ಫೆ೨೭ ರಂದು ಸಮಾಜದ ಎಲ್ಲರೂ ಸೇರಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿದೆ. ಅಂದಿನ ಕಾರ್ಯಕ್ರಮ ಆಯೋಜನೆಗೆ ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಮಾಜದ ಪ್ರಮುಖರು ಇದ್ದರು.