

ರಾಯಬಾಗ: ತಾಲೂಕಿನ ಮಾರಡಿ, ಬೂದಿಹಾಳ, ಹುಬ್ಬರವಾಡಿ, ಮೇಖಳಿ, ಬಾವನ ಸೌಂದತ್ತಿ ಮತ್ತು ನಸಲಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಕೃಷಿ ವಿಜ್ಞಾನಿಗಳನ್ನೋಳಗೊಂಡ ಪೀಡೆ ಸರ್ವೇಕ್ಷಣಾ ತಂಡ ಮಂಗಳವಾರ ವಿವಿಧ ಬೆಳೆ ವೀಕ್ಷಣೆ ನಡೆಸಿತು.
ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ ಮಾತನಾಡಿ, ಗೊಣ್ಣೆಹುಳು ನಿರ್ವಹಣೆಗೆ ಮೆಟರೈಜಿಯಂ 5-10 ಕೆಜಿ, 500 ಕೆಜಿ ಸಗಣಿ ಗೊಬ್ಬರದಲ್ಲಿ ಬೆರೆಸಿ ಹೊಲಕ್ಕೆ ಹಾಕುವುದು. ಫೆಬ್ರುವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಲೈಟ್ ಟ್ರಾೃಪ್ ಮೂಲಕ ಗೊಣ್ಣೆಹುಳುವಿನ ತಾಯಿ ಕೀಟವನ್ನು ನಾಶಪಡಿಸುವುದು. ಪಿಪ್ರೋನಿಲ್ ಹರಳು 5-6 ಕೆಜಿ ಪ್ರತಿ ಎಕರೆಗೆ ಹಾಕುವುದು.
ಕೊನೆಗೆ ಕ್ಲೋರೋಫೈರಿಪಾಸ್ 10 ಮಿಲಿ ಪ್ರತಿ ಲೀಟರ್‌ಗೆ ಬೆರೆಸಿ ಕಬ್ಬು ಬೆಳೆ ಬುಡಕ್ಕೆ ಸುರಿದರೆ ಗೊಣ್ಣೆಹುಳು ನಿರ್ವಹಿಸಲು ಸಾಧ್ಯ ಎಂದರು.
ಸಹಾಯಕ ಕೃಷಿ ನಿರ್ದೇಶಕ ಸಿ.ಐ.ಹೂಗಾರ ಮಾತನಾಡಿ, ಕಾಯಿ ಹಂತದಲ್ಲಿರುವ ಸೋಯಾಬೀನ್ ಬೆಳೆಗೆ ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಪ್ರತಿ ಪಂಪ್‌ಗೆ 100 ಗ್ರಾಂ ಹಾಕಿ ಸಿಂಪಡಿಸಬೇಕು. ಗೋವಿನಜೋಳದಲ್ಲಿ ಗೊಣ್ಣೆಹುಳು (ಲದ್ದಿ ಹುಳು) ನಿರ್ವಹಣೆಗೆ ಇಮಾಮ್ಯಾಕ್ಟಿನ್ ಬೆಂಜೋಯಟ್ 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ಸೂಚಿಸಿದರು.
ತುಕ್ಕಾನಟ್ಟಿ ಕೆವಿಕೆ ವಿಜ್ಞಾನಿ ಡಾ. ಧನಂಜಯ ಚೌಗಲಾ, ಕೃಷಿ ಅಧಿಕಾರಿ ಬಿ.ಎಸ್.ಶಾನವಾಡ, ಸಹಾಯಕ ಕೃಷಿ ಅಧಿಕಾರಿ ಡಿ.ಎನ್. ಕೋಳಿ, ಎಂ.ಎಸ್.ಸವದಿ, ಹಾಲಪ್ಪ ಮೇತ್ರಿ, ಕೃಷಿ ಸಂಜೀವಿನಿ ಸಿಬ್ಬಂದಿ ಇದ್ದರು.