

ರಾಯಚೂರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ 13ನೇ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವದ ನಿಮಿತ್ತ ದೇಶದ ಸೈನಿಕರ ಹಾಗೂ ನಾಗರಿಕರ ರಕ್ಷಣೆ ಮತ್ತು ಯೋಗಕ್ಷೇಮಕ್ಕಾಗಿ ಶ್ರೀಮಠದಲ್ಲಿ ಸೋಮವಾರ ಮೃತ್ಯುಂಜಯ, ಆಯುಷ್ಯ, ಮಾರ್ಕಂಡೇಯ ಸೇರಿ ಅನೇಕ ಹೋಮಗಳನ್ನು ಮಾಡಲಾಯಿತು.
ಬೆಳಗ್ಗೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಬ್ರಹ್ಮಕರಾರ್ಚಿತ ಶ್ರೀ ಮೂಲ ರಾಮದೇವರ ಪೂಜೆ, ಶ್ರೀ ಷೋಡಶಬಾಹು ನರಸಿಂಹ ದೇವರ ಪೂಜೆಯನ್ನು ಭಕ್ತಿಯಿಂದ ನೆರವೇರಿಸಿದರು.
ನಂತರ ಅಪರೇಷನ್ ಸಿಂಧೂರ ಯಶಸ್ವಿ ಹಿನ್ನಲೆ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧದಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಸೈನಿಕರು, ನಾಗರಿಕರ ರಕ್ಷಣೆ ಮತ್ತು ಯೋಗಕ್ಷೇಮಕ್ಕಾಗಿ ದೈವಿಕ ಆಶೀರ್ವಾದವನ್ನು ಕೋರಿ ಮೃತ್ಯುಂಜಯ, ಆಯುಷ್ಯ, ಮಾರ್ಕಂಡೇಯ ಸೇರಿ ಅನೇಕ ಹೋಮಗಳನ್ನು ನೆರವೇರಿಸಿದರು.
ಶ್ರೀಗಳು ಮಾತನಾಡಿ, ರಾಷ್ಟ್ರೀಯ ಬಿಕ್ಕಟ್ಟನ್ನು ಪರಿಗಣಿಸಿ, ಸಾಂಪ್ರದಾಯಿಕ ಮತ್ತು ಅಗತ್ಯ ಧಾರ್ಮಿಕ ಆಚರಣೆಗಳನ್ನು ಹೊರತುಪಡಿಸಿ ಯಾವುದೇ ಆಚರಣೆಗಳನ್ನು ನಡೆಸಲಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಚಿತ್ರನಟ ಉಪೇಂದ್ರ, ನಟಿಯರಾದ ಪ್ರಿಯಾಂಕ, ತಾರಾ ಸೇರಿ ಅನೇಕರು ಭಾಗವಹಿಸಿದ್ದರು.