ಚಿಕ್ಕಬಳ್ಳಾಪುರ ನಗರ ಬಜೆಟ್ ಮೇಲೆ ನಾನಾ ನಿರೀಕ್ಷೆಗಳು

4CBP1chikkaballapurnagarasabe-2.jpg
Published on

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ನಗರಿಯ ಬಜೆಟ್ ಸಿದ್ಧತೆ ಕೈಗೊಳ್ಳಲು ನಗರಸಭೆ ಮುಂದಾಗಿದ್ದು ಜನರಲ್ಲಿ ಸಾಕಷ್ಟು ಕೊಡುಗೆಗಳ  ನಿರೀಕ್ಷೆಗಳಿವೆ.
ಫೆ.6 ರಂದು ನಗರಸಭಾ ಕಚೇರಿಯ ಸಭಾಂಗಣದಲ್ಲಿ 2025-26 ನೇ ಸಾಲಿನ ಬಜೆಟ್ ತಯಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆಗಳನ್ನು ಪಡೆಯುವ ಉದ್ದೇಶದೊಂದಿಗೆ ಪೂರ್ವ ಸಿದ್ಧತೆ ಚರ್ಚೆಯ ಸಭೆಯನ್ನು ಕೈಗೊಳ್ಳಲಾಗಿದೆ. ಇದರಲ್ಲಿ ನಗರಸಭಾ ಮಾಜಿ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ವ್ಯಾಪಾರಿಗಳು ಸೇರಿದಂತೆ ಹಲವರು ನಿರೀಕ್ಷೆಯ ಯೋಜನೆ ರೂಪಿಸಿ, ಅನುದಾನ ಮೀಸಲಿಡಲು ಗಮನ ಸೆಳೆಯಲಿದ್ದಾರೆ. ಪ್ರತಿ ಬಾರಿ ಬಜೆಟ್ ಮಂಡನೆಯ ಸಂದರ್ಭದಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆಯಾದರೂ ಮಹತ್ತರವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವೈಫಲ್ಯವನ್ನು ಹೊಂದಲಾಗಿದೆ.‌ ಕೋಟ್ಯಂತರ ರೂ ವೆಚ್ಚದಲ್ಲಿ ತಜ್ಞರ ಮೂಲಕ ಹಿಂದೆ ರೂಪಿಸಲಾಗಿದ್ದ ಸೂಪರ್ 20 ವಿಜನ್ ಯೋಜನೆಯು ಅರ್ಧಂಬರ್ಧ ಕಾಮಗಾರಿಗಳಲ್ಲಿ ಉಳಿದು ಹೋಗಿದೆ. ಹಲವು ಘೋಷಣೆಯ ಕೆಲಸಗಳು ಪ್ರಾರಂಭವಾಗಿಲ್ಲ. ಕಂದವಾರ ಕೆರೆಯ ವಾಕಿಂಗ್ ಪಾಥ್, ಉದ್ಯಾನ ನಿರ್ಮಾಣದ ಪ್ರಕ್ರಿಯೆಯು ರೂಪುರೇಷೆಗೆ ಅನುಗುಣವಾಗಿ ನಡೆದಿಲ್ಲ. ಅಪ್ಪಯ್ಯನಕುಂಟೆ ಜಾಗದಲ್ಲಿ ಅಪೂರ್ಣ ಹಂತದಲ್ಲಿರುವ ಕಾಮಗಾರಿಯು, ಜಿಲ್ಲಾ ಕೇಂದ್ರದಲ್ಲಿನ ಯುಜಿಡಿ ಚರಂಡಿ ಅವ್ಯವಸ್ಥೆಯು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದೂರದೃಷ್ಟಿ ಹೇಗಿದೆ?ಎಂಬುದಕ್ಕೆ ನಿದರ್ಶನ.‌ ವ್ಯಾಪಕವಾಗಿ ಸರ್ಕಾರಿ ಜಾಗಗಳು ಅಕ್ರಮ ಒತ್ತುವರಿಯಾಗಿವೆ. ಇದರಲ್ಲಿ ಕೆಲ ನಗರಸಭಾ ಸದಸ್ಯರು, ಮಾಜಿ ಸದಸ್ಯರೇ ಮುಂಚೂಣಿಯಲ್ಲಿರುವುದು ದುರದೃಷ್ಟಕರ.

*31 ವಾರ್ಡುಗಳ ನೀಲಿನಕ್ಷೆ*
ಅಂದಾಜು 65 ಸಾವಿರ ಜನಸಂಖ್ಯೆ ಹೊಂದಿರುವ
ನಗರದ ವ್ಯಾಪ್ತಿಯಲ್ಲಿ 31 ವಾರ್ಡುಗಳಿವೆ. 12 ಕ್ಕೂ ಹೆಚ್ಚು ಬಡಾವಣೆಗಳು ಕೊಳೆಗೇರಿ ಪ್ರದೇಶಗಳ ಪಟ್ಟವನ್ನು ಹೊಂದಿವೆ. ಹಳೇ ಬಡಾವಣೆಗಳು ಯೋಜನಾ ಬದ್ಧವಾಗಿ ನಿರ್ಮಾಣಗೊಂಡಿಲ್ಲ. ಹೊಸದರ ಸೃಷ್ಟಿಯ ವೇಳೆ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ನಗರಸಭಾ ಸದಸ್ಯರು ಸಾಮಾನ್ಯವಾಗಿ ಕೊಳವೆಬಾವಿ ಕೊರೆಸುವುದು, ರಸ್ತೆ ಚರಂಡಿ ನಿರ್ಮಾಣ, ಉದ್ಯಾನಗಳ ಅಭಿವೃದ್ಧಿ, ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಯ ಸಾಮಾನ್ಯ ಯೋಜನೆಗಳಿಗೆ ಮಾತ್ರ ಸೀಮಿತವಾಗುತ್ತಿದ್ದು ವೈಜ್ಞಾನಿಕ, ಹೈಟೆಕ್ ರೀತಿಯಲ್ಲಿ ಬಡಾವಣೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಯೋಜನಾ ಬದ್ಧ ನೀಲಿನಕ್ಷೆ ಇಲ್ಲ. ಜನರು ನಾನಾ ಸಮಸ್ಯೆಗಳಿಗೆ ತೊಂದರೆ ಅನುಭವಿಸುವಂತಾಗಿದೆ.

*ಆದಾಯ ಸಂಗ್ರಹದಲ್ಲಿ ಸಾಧನೆ*
ಬೆಂಗಳೂರಿಗೆ ಸಮೀಪದಲ್ಲಿರುವ, ಹೆಚ್ಚಿನ ಪ್ರವಾಸಿ ತಾಣಗಳನ್ನು ಹೊಂದಿರುವ ಸಿಟಿಯನ್ನು ಅಗತ್ಯ ಮೂಲ ಸೌಕರ್ಯಗಳೊಂದಿಗೆ ಮಹಾನಗರವನ್ನಾಗಿ ಅಭಿವೃದ್ಧಿಪಡಿಸಲು ಪೂರಕವಾದ ವಾತಾವರಣ ಇದೆ. ಸರ್ಕಾರದಿಂದ ಅಗತ್ಯ ಅನುದಾನವೂ ಮಂಜೂರಾಗುತ್ತಿದೆ. ಆದರೆ, ಕೆಲಸವು ಯೋಜನಾ ಬದ್ಧವಾಗಿ ನಿರ್ವಹಣೆಯಾಗುತ್ತಿಲ್ಲ. ವಿವಿಧ ಬಗೆಯ ತೆರಿಗೆ ಸಂಗ್ರಹದಲ್ಲಿ ಕಡೆಗಣನೆಯು ಆದಾಯ ಖೋತಾಗೆ ಪ್ರಮುಖ ಕಾರಣವಾಗಿದೆ. ಇದಕ್ಕೆ ಅಭಿವೃದ್ಧಿಯಲ್ಲಿ ಹಿಂದುಳಿಯುವಂತಾಗಿದ್ದು ನಗರಸಭೆ ಆಡಳಿತ ಯಂತ್ರಾಂಗವು ಚುರುಕುಗೊಳ್ಳಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net