

ಶ್ರೀರಂಗಪಟ್ಟಣ: ಆಧುನಿಕ ಜೀವನಶೈಲಿ ಮತ್ತು ಒತ್ತಡದ ಬದುಕಿನ ಕಾರಣ ಹಲವರು ಬಾಲ್ಯದಲ್ಲಿಯೇ ವಿವಿಧ ರೋಗಳಿಗೆ ತುತ್ತಾಗುತ್ತಿರುವುದು ವಿಷಾದದ ಸಂಗತಿ ಎಂದು ಯೋಗ ತರಬೇತುದಾರ ಕೆ.ಶೆಟ್ಟಹಳ್ಳಿ ಅಪ್ಪಾಜಿ ತಿಳಿಸಿದರು.
ತಾಲೂಕಿನ ಬಲ್ಲೇನಹಳ್ಳಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಆಯೋಜಿಸಿರುವ 2ನೇ ವರ್ಷದ ಗ್ರಾಮೀಣಾ ಮಕ್ಕಳ ಬೇಸಿಗೆ ಶಿಬಿರದ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಯೋಗದ ಬಗ್ಗೆ ಮಾರ್ಗದರ್ಶನ ನೀಡಿ ಮಾತನಾಡಿದರು.
ಪ್ರಸ್ತುತ ಎದುರಾಗಿರುವ ಮಾನವನ ಸಾಕಷ್ಟು ವ್ಯಾಧಿಗಳಿಗೆ ಪ್ರಾಥಮಿಕ ಹಂತದಲ್ಲೇ ಯೋಗ ಸಿದ್ಧಔಷಧಿಯಾಗಿದ್ದು, ಮನಸ್ಸು ಮತ್ತು ದೇಹವನ್ನು ಯೋಗದ ಮೂಲಕ ನಿಯಂತ್ರಣ ಮಾಡಿಕೊಂಡಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಪ್ರತಿ ನಿತ್ಯ ಯೋಗ ಮಾಡುವುದರಿಂದ ದೇಹ ಉತ್ತಮ ಸ್ಥಿತಿ ಹಾಗೂ ಲವಲವಿಕೆಯಿಂದ ಕೂಡಿರುತ್ತದೆ. ಸ್ಥಿರಂ ಸುಖಂ ಆಸನಂ ಎಂಬ ಸ್ತೋತ್ರದಂತೆ ಸ್ಥಿರವಾಗಿ ಸುಖವಾಗಿ ಆಸನ ಮಾಡುವುದರ ಮೂಲಕ ಪ್ರಾಣಾಯಾಮವನ್ನು ಬದುಕಿನಲ್ಲಿ ಅಳವಡಿಸಿಕೊಂಡು ರೋಗಮುಕ್ತ ಒತ್ತಡ ಮುಕ್ತ ಬದುಕನ್ನು ನಡೆಸಬಹುದಾಗಿದೆ ಎಂದರು.
ಶಿಬಿರದ ಆಯೋಜಕ ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಮಾತನಾಡಿ, ವಿಶ್ವಕ್ಕೆ ಯೋಗವನ್ನು ಪರಿಚಯಿಸಿಕೊಟ್ಟ ಶ್ರೇಯಸ್ಸು ಭಾರತಕ್ಕೆ ಸಂದಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯರು ವಿದೇಶಿ ಸಂಸ್ಕೃತಿಗೆ ದಾಸರಾಗುತ್ತಿರುವುದು ವಿಷಾದಕರ. ವಿದ್ಯಾರ್ಥಿಗಳು ಬಾಲ್ಯದಲ್ಲೇ ಆರೋಗ್ಯಕರ ಚಟುವಟಿಕೆಗಳನ್ನು ಅಳವಡಿಸಿಕೊಂಡು ಸ್ವಾಭಿಮಾನದ ಬದುಕನ್ನು ಕಲ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ನೆರೆದಿದ್ದ ವಿದ್ಯಾರ್ಥಿಗಳು ಯೋಗ ಗುರುವಿನೊಂದಿಗೆ ಯೋಗದ ವಿವಿಧ ಆಸನಗಳು ಹಾಗೂ ಭಂಗಿಗಳನ್ನು ಅಭ್ಯಾಸ ಮಾಡಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೆಂಕಟರಾಮು, ಲೆಕ್ಕ ಸಹಾಯಕಿ ದಿವ್ಯಾ, ಸಿಬ್ಬಂದಿ ಮಹೇಶ್, ಅರುಣ್, ಮಹಾದೇವ ಮತ್ತಿತರರಿದ್ದರು.