

ಕುಮಟಾ: ತಾಲೂಕಿನ ಬಾಡದ ಗುಡೇ ಅಂಗಡಿಯ ಶ್ರೀ ಕಾಂಚಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನವರಾತ್ರಿ ಉತ್ಸವ ಆಚರಿಸಲಾಗುವುದು. ನವರಾತ್ರಿ ನಿಮಿತ್ತ ಅ. 3ರಿಂದ 12 ರವರೆಗೆ ದೇವಾಲಯದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಎಸ್. ಹೆಗಡೆ ತಿಳಿಸಿದ್ದಾರೆ.
ಮಹಾಗಣಪತಿ ಪೂಜೆಯೊಂದಿಗೆ ಆರಂಭಗೊಂಡು, ಕಲಶ ಮತ್ತು ದೀಪ ಸ್ಥಾಪನೆ, ಸಪ್ತಶತೀ ಪಾರಾಯಣ, ಅಭಿಷೇಕಗಳು, ಸರ್ವಾಲಂಕಾರ ಸಹಿತ ಕಲ್ಪೋಕ್ತ ಪೂಜೆ, ರಂಗಪೂಜೆ, ಮಹಾಮಂಗಳಾರತಿ, ಪರಿವಾರ ದೇವತೆಗಳಿಗೆ ಉತ್ಸವ ಸಹಿತ ಬಲಿ ಸಮರ್ಪಣೆ ನಡೆಯಲಿದೆ. ವಿಜಯದಶಮಿಯಂದು ಹೊಸತಿನ ಹಬ್ಬ, ಪಲ್ಲಕ್ಕಿ ಉತ್ಸವಗಳು ನಡೆಯಲಿದೆ.
ಸ್ಥಳೀಯ ತಂಡಗಳಿಂದ ಪ್ರತಿದಿನ ಸಂಜೆ ಭಜನಾ ಸೇವೆ, ಗಜನಿ ರೈತರಿಂದ ರಂಗ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಅಘನಾಶಿನಿಯಿಂದ ಹಳಕಾರ ಗ್ರಾಮದ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದವರು, ಯೂನಿವರ್ಸಿಟಿ ರ್ಯಾಂಕ್ ಪಡೆದವರು ಹಾಗೂ ಕ್ರೀಡಾ ಸಾಧನೆಗೈದವರನ್ನು ಗೌರವಿಸಲಾಗುವುದು. ನವರಾತ್ರಿಯುದ್ದಕ್ಕೂ ‘ಸಪ್ತ ಯಕ್ಷ ಸೌರಭ’ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.