

ಮಳವಳ್ಳಿ: ಪಟ್ಟಣದಲ್ಲಿ ಫೆ.18 ರಂದು ಹಮ್ಮಿಕೊಳ್ಳಲಾಗಿರುವ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪುರಸಭೆ ನಿವೇಶನದಲ್ಲಿ ಸಿಎಂ ಸಮಾರಂಭಕ್ಕಾಗಿ ಸಿದ್ದಗೊಳ್ಳುತ್ತಿರುವ ವೇದಿಕೆ ಬಳಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ನಾವು ಅಧಿಕಾರಕ್ಕೆ ಬಂದ ಕೂಡಲೇ ಅನುಷ್ಠಾನಗೊಳಿಸಿದ್ದೇವೆ. ಆದ್ದರಿಂದ ಫಲವಾನುಭವಿಗಳ ಸಮಾವೇಶವನ್ನು ರಾಜ್ಯದೆಲ್ಲೆಡೆ ಸರ್ಕಾರ ನಡೆಸುತ್ತಿದೆ. ಅದರಂತೆ ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಸಮಾರಂಭ ನೆರವೇರಿದ್ದು, ಪಟ್ಟಣದಲ್ಲಿ ಆಯೋಜಿಸಿರುವ ಸಮಾವೇಶಕ್ಕೆ ಇದೇ ಮೊದಲ ಬಾರಿಗೆ ಸಿಎಂ ಆದ ನಂತರ ಸಿದ್ದರಾಮಯ್ಯರವರೆ ಆಗಮಿಸಿ ಭಾಗಿಯಾಗುವುದರ ಜತೆಗೆ ಕ್ಷೇತ್ರದ ಸುಮಾರು 500 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಹಿಸಲಿದ್ದಾರೆ ಎಂದ ಅವರು, ಮುಖ್ಯ ಅತಿಥಿಗಳಾಗಿ ಸಚಿವರಾದ ಚಲುವರಾಯಸ್ವಾಮಿ, ಎಚ್.ಸಿ.ಮಹದೇವಪ್ಪ, ಕೃಷ್ಣಬೈರೇಗೌಡ,. ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ದಿನೇಶ್ ಗುಂಡುರಾವ್, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ಬಿ.ಎಸ್.ಸುರೇಶ್, ಡಾ.ಸಿ.ಎಂ.ಸುಧಾಕರ್, ರಹೀಂಖಾನ್, ಈಶ್ವರ್ ಬಿ.ಖಂಡ್ರೆ, ಶಿವರಾಜ್ ಸಂಗಪ್ಪ ತಂಗಡಗಿ, ಎಸ್.ಎಸ್.ಮಲ್ಲಿಕಾರ್ಜುನ, ಜಮೀರ್ ಅಹಮದ್ ಖಾನ್, ಎನ್.ಎಸ್.ಬೋಸರಾಜು ಹಾಗೂ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಂದಿನ ಸಮಾರಂಭಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ಆಗಮಿಸುವ ನಿರೀಕ್ಷೆಯಿದ್ದು, ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸುತ್ತಿರುವುದರಿಂದ ಸಮಾರಂಭದಲ್ಲಿ ಸಣ್ಣ ಲೋಪವೂ ಆಗದಂತೆ ಎಚ್ಚರ ವಹಿಸಲಾಗಿದೆ ಎಂದರು.