

ಬೆಂಗಳೂರು ಗ್ರಾಮಾಂತರ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಹೆಚ್ಚಿನ ಕೆಲಸ ಮಾಡಿಸಿಕೊಳ್ಳುವ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಆರ್.ನಳಿನಾಕ್ಷಿ ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಕಾರ್ಯಕರ್ತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಹಯೋಗದಲ್ಲಿ ನ.26 ರಂದು ದೇಶದಾದ್ಯಂತ ಬೃಹತ್ ಮುಷ್ಕರ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆದು ನಮ್ಮ ಒಗ್ಗಟ್ಟು ಪ್ರದರ್ಶಿಸಲು ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಿಐಟಿಯು ದೇವನಹಳ್ಳಿ ತಾಲೂಕು ಅಧ್ಯಕ್ಷೆ ಎಚ್.ಪುಷ್ಪಾವತಮ್ಮ ಮಾತನಾಡಿ, ಕನಿಷ್ಠ 21 ಸಾವಿರ ರೂ. ವೇತನ, ಮಾಸಿಕ 10 ಸಾವಿರ ರೂ. ನಿವೃತ್ತಿ ವೇತನ ನಿಗದಿಮಾಡುವುದು, 2020ರ ಶಿಕ್ಷಣ ನೀತಿಯಿಂದ ಅಂಗನವಾಡಿಗಳನ್ನು ರಕ್ಷಿಸುವುದು, ಪೂರ್ವಪ್ರಾಥಮಿಕ ಶಾಲೆಗಳನ್ನು ಅಂಗನವಾಡಿಗಳಿಗೆ ವಹಿಸುವುದು ಸೇರಿ ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ನಿಗದಿ, ಕರೊನಾ ಸೋಂಕಿನಿಂದ ಮೃತರಾದ ಕಾರ್ಯಕರ್ತೆಯರ ಮಕ್ಕಳಿಗೆ ಉದ್ಯೋಗ, ಕರೊನಾದಿಂದ ಮೃತರಾದ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು, ರೈತ ವಿರೋಧಿ ಕಾರ್ಮಿಕ ವಿರೋಧಿ ನೀತಿ ಹಿಂಪಡೆಯಬೇಕು ಎಂಬ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಹಮ್ಮಿಕೊಳ್ಳಲಾಗುದೆ ಎಂದರು.
ಸಿಐಟಿಯು ಉಪಾಧ್ಯಕ್ಷೆ ವೆಂಕಟಲಕ್ಷ್ಮೀ, ಪಾರ್ವತಮ್ಮ, ಲಕ್ಷ್ಮೀ, ವಸಂತಾ, ಆಶಾ, ದೇವನಹಳ್ಳಿ ತಾಲೂಕು ಕಾರ್ಯದರ್ಶಿ ಸೀತಾಲಕ್ಷ್ಮೀ, ಸಹ ಕಾರ್ಯದರ್ಶಿ ಅರಸಮ್ಮ, ಖಜಾಂಚಿ ಅನಸೂಯಾದೇವಿ, ಹೊಸಕೋಟೆ ತಾಲೂಕು ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷೆ ಸುನಂದಾ, ಸಹ ಕಾರ್ಯದರ್ಶಿ ಯಶೋದಾ, ಖಜಾಂಚಿ ಶಾರದಾ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷೆ ಸುಮಾ, ಸಹ ಕಾರ್ಯದರ್ಶಿ ಮಂಜುಳಾ ಮತ್ತಿತರರು ಪಾಲ್ಗೊಂಡಿದ್ದರು.
ಎಡಿಸಿ ಭರವಸೆ: ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ ನಾಯಕ್ ಭರವಸೆ ನೀಡಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ನ.26ರಂದು ಮುಷ್ಕರ ಹಮ್ಮಿಕೊಳ್ಳಲಾಗಿದೆ. ಎಲ್.ಆರ್.ನಳಿನಾಕ್ಷಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ