

ಚಿತ್ರದುರ್ಗ: ಆಟೋಗಳಿಗೆ ಹೊಸ ಪರ್ಮಿಟ್ ನೀಡಬಾರದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವಭಾರತ ಹಿಂದು ದಲಿತ ಸಂಘದ ನೇತೃತ್ವದಲ್ಲಿ ಆಟೋ ಚಾಲಕರು ಡಿಸಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಪರ್ಮಿಟ್ ಇಲ್ಲದಿರುವ ಆಟೋಗಳಿಗೆ ಅವಕಾಶ ನೀಡಬಾರದು. ಕನಿಷ್ಠ ದರವನ್ನು ಒಂದು ಕಿ.ಮೀ.ಗೆ 20 ರೂ.ನಿಗದಿಪಡಿಸಬೇಕು. ಚಾಲಕರು ಗುರುತಿಸುವ ಸ್ಥಳಗಳಲ್ಲಿ ಆಟೋ ನಿಲ್ದಾಣಗಳನ್ನು ನಿರ್ಮಿಸಬೇಕು. ಚಾಲಕರ ಅಭಿವೃದ್ಧಿಗಾಗಿ ನಿಗಮ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿದರು.
ಹಳ್ಳಿಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಅಪೆ ಆಟೋಗಳ ಸಂಚಾರಕ್ಕೆ ಕಡಿವಾಣ ಹಾಕುಬೇಕು. ಬಡ ಚಾಲಕರಿಗೆ ವಸತಿ ಸೌಕರ್ಯ ಒದಗಿಸಬೇಕು. ನಗರ ಸಾರಿಗೆ ಬಸ್‌ಗಳಿಗೆ ನಿಗದಿತ ಸಮಯ ಮತ್ತು ಸ್ಥಳವನ್ನು ಕಡ್ಡಾಯಗೊಳಿಸಬೇಕು. ತಿಂಗಳ ಒಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ಹರೀಶ್, ಆಟೋ ಘಟಕದ ಅಧ್ಯಕ್ಷ ಎಸ್.ಸೆಂದಿಲ್‌ಕುಮಾರ್, ತಿಪ್ಪೇಸ್ವಾಮಿ, ಹನುಮಂತ, ಕುಮಾರ್, ರಾಜ ಮತ್ತಿತರ ಆಟೋ ಚಾಲಕರು, ಮಾಲೀಕರು ಪಾಲ್ಗೊಂಡಿದ್ದರು.