

ಬೆಳಗಾವಿ: ನಗರದ ಹೂ, ಹಣ್ಣುಗಳ ಮಾರುಕಟ್ಟೆಗಳನ್ನು ಸರ್ಕಾರದ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜ ಹಾಗೂ ವಿವಿಧ ಸಂಘಟನೆಗಳಿಂದ ಮಂಗಳವಾರ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಇಲ್ಲಿನ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಕೃಷಿ ಉತ್ಪನ್ನಗಳು ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಮಾರಾಟವಾಗಬೇಕು. ನಗರದ ಹೂ, ಹಣ್ಣು ಮಾರುಕಟ್ಟೆಗಳನ್ನೂ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಬೇಕು. ಖಾಸಗಿ ಮಾರುಕಟ್ಟೆಗೆಳಲ್ಲಿ ಇಲ್ಲಿಯವರೆಗೆ ಅನಧಿಕೃತವಾಗಿ ರೈತರಿಂದ ಪಡೆದ ಕಮಿಷನ್ ಮರಳಿ ಕೊಡಿಸಬೇಕು ಎಂದು ಒತ್ತಾಯಿಸಿದರು. ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೊದಗಿ, ಗೀತಾ ಜೆ., ಸಂಜೀವ ಡೊಂಗರಗಾವಿ, ರಮೇಶ ರಾಮಗೂಂಡನ್ನವರ, ಶೇಖರ ಅಕ್ಕನ್ನವರ, ಮಲ್ಲಿಕಾರ್ಜುನ ಡೊಂಗರಗಾವಿ, ಶಂಕರ ಢವಳಿ ಇತರರಿದ್ದರು.