ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಯ ವಿದ್ವತ್ ಕಾರ್ಯಕ್ರಮ

Published on

ಮೈಸೂರು: ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದಿಂದ ಮಾ.22 ಮತ್ತು 23 ರಂದು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಯ ವಿದ್ವತ್-2024 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ತಿಳಿಸಿದರು.
ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲಿ ವಾಣಿಜ್ಯ, ನಿರ್ವಹಣಾ, ತಂತ್ರಜ್ಞಾನ ಮತ್ತು ಕಲಾ ಕೌಶಲ ಬೆಳೆಸಲು ಈ ಸ್ಪರ್ಧೆ ಉತ್ತಮ ವೇದಿಕೆ ಆಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.22ರಂದು ಬೆಳಗ್ಗೆ 9.30ಕ್ಕೆ ಎಲ್ ಆ್ಯಂಡ್ ಟಿ ಕಂಪನಿಯ ಹಿರಿಯ ಅಧಿಕಾರಿ ಶಶಿಧರ ಡೋಂಗ್ರೆ ಕಾರ್ಯಕ್ರಮ ಉದ್ಘಾಟಿಸುವರು. ಕ್ವಾಲಿಟಿ ರೋಸ್ಸೆಲ್ ಟೆಕ್ ಸಿಸ್ಟಮ್‌ನ ಉಪಾಧ್ಯಕ್ಷ ಬಿ.ಪಿ.ಪ್ರಸಾದ್ ಅತಿಥಿಗಳಾಗಿರುವರು. ಸಂಸ್ಥೆಯ ಗೌರವ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಪಿ.ವಿಶ್ವನಾಥ್, ಕೋಶಾಧ್ಯಕ್ಷ ಶೈಲರಾಮಣ್ಣವರ್, ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ನಾಗರಾಜು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಾ.23ರ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಿಯೆಂಟ್ ಡಿಎಲ್‌ಎಂ ಕಂಪನಿಯ ಪ್ರಧಾನ ವ್ಯವಸ್ಥಾಪಕ ಸುರೇಶ್ ನಾರಾಯಣ್ ಅತಿಥಿಯಾಗಿ ಭಾಗವಹಿಸುವರು. ಎರಡೂ ದಿನ ಹಣಕಾಸು, ತೆರಿಗೆ, ಉತ್ತಮ ಉದ್ಯಮಿ, ಮಾರ್ಕೆಟಿಂಗ್, ಮಾನವ ಸಂಪನ್ಮೂಲ ನಿರ್ವಹಣೆ, ಬಹುಮಾಧ್ಯಮ ಮತ್ತು ಅನಿಮೇಷನ್ ಮೊದಲಾದ ವಿಭಾಗಗಳಲ್ಲಿ ಸ್ಪರ್ಧೆಯೊಡನೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳೂ ನಡೆಯಲಿವೆ. ವಿವಿಧ ಕಾಲೇಜುಗಳ 50ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ವಿಜೇತರಿಗೆ ನಗದು ಬಹುಮಾನ, ಟ್ರೋಫಿ ನೀಡಲಾಗುತ್ತದೆ ಎಂದು ತಿಳಿಸಿದರು.
ಪ್ರಾಧ್ಯಾಪಕರಾದ ಡಾ.ಕೆ.ಎನ್.ಹರಿಪ್ರಸಾದ್, ಪ್ರೊ.ಆರ್.ವಿದ್ಯಾ, ಸೌಮ್ಯಾ, ಪ್ರೊ.ಎನ್.ಗೀತಾ, ಎನ್.ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net