ಜ್ಞಾನ ನೀಡುವ ಶಿಕ್ಷಕರನ್ನು ಸ್ಮರಿಸಿ: ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿಕೆ

Various award ceremonies Mandya
Published on

ಮಂಡ್ಯ: ಜ್ಞಾನವೆಂಬ ಅಂಧಕಾರದಿಂದ ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಗುರುಗಳನ್ನು ಸದಾ ಸ್ಮರಿಸುವ ಕೆಲಸ ಆಗಬೇಕು ಎಂದು ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ತಿಳಿಸಿದರು.

ನಗರದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಶಸ್ತಿ ನೀಡುವುದರಿಂದ ಪುರಸ್ಕೃತರ ಮೇಲಿನ ಜವಾಬ್ದಾರಿ ಹೆಚ್ಚುತ್ತದೆ. ಸೇವಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ನೆನೆದು ಆ ಕೆಲಸವು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲೆಂಬುವ ಆಶಯವನ್ನು ಈ ಪ್ರಶಸ್ತಿ ತಿಳಿಸುತ್ತದೆ. ಕರ್ನಾಟಕ ಸಂಘವು ಜಯಪ್ರಕಾಶಗೌಡ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆ ಎಂದರು.

ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಪಿ.ಸತ್ಯನರಾಯಣ, ಇತ್ತಿಚಿನ ದಿನಗಳಲ್ಲಿ ಪ್ರಶಸ್ತಿ ಹಿಂದೆ ಓಡಿ ಹೋಗುತ್ತಿರುವ ಹಾಗೂ ಲಾಭಿ ನಡೆಸುತ್ತಿರುವುದನ್ನು ನೋಡಿದ್ದೇವೆ. ಕರ್ನಾಟಕ ಸಂಘದ ಪ್ರಶಸ್ತಿಗೆ ಒಂದು ಮೌಲ್ಯವಿದೆ. ಆ ಮೌಲ್ಯವಿರುವ ಪ್ರಶಸ್ತಿಯನ್ನು ಕುಲಪತಿಗಳು ಪ್ರದಾನ ಮಾಡಿರುವುದು ಅತ್ಯಂತ ಸಂತಸ ತಂದಿದೆ. ವಿದ್ಯಾರ್ಥಿಗಳು ಕೇಳುವ ಮನಸ್ಥಿತಿ ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಕರಾದವರು ಅವರನ್ನು ಹಿಡಿದಿಟ್ಟುಕೊಳ್ಳುವುದೇ ಸಾಹಸವಾಗಿದೆ. ವಿದ್ಯಾರ್ಥಿಗಳಿಗೆ ಬೇರೆ ವಿಚಾರಗಳು ಸೆಳೆಯುತ್ತಿವೆ. ಟಿವಿ, ಮೊಬೈಲ್ ಸೇರಿದಂತೆ ಇತರೆ ವಿಷಯಗಳಲ್ಲಿ ಆಸಕ್ತಿಯು ಕಾರಣವಾಗಿದೆ. ಹಳ್ಳಿಗಾಡಿನ ವಿದ್ಯಾರ್ಥಿಗಳು ಈಗಾಗಲೇ ವೃತ್ತಿನಿರತರಾಗಿದ್ದಾರೆ, ಅದಕ್ಕೆ ಪೋಷಕರ ಸಹಕಾರವಿದೆ. ಸಭೆ ಸಮಾರಂಭಗಳಲ್ಲಿ ಊಟ ಬಡಿಸಲು ಹೋಗಿ ಹಣ ಗಳಿಸುತ್ತಿದ್ದಾರೆ. ಹೈಸ್ಕೂಲ್ ಮಟ್ಟದಲ್ಲಿಯೇ ಸ್ವಂತ ಮೊಬೈಲ್ ಹೊಂದಿದ್ದಾರೆ ಎನ್ನುವುದೇ ದೊಡ್ಡ ಸಮಸ್ಯೆ ಎಂದು ವಿಷಾದಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಪ್ರೊ.ನರಸಿಂಹೇಗೌಡ ನಾರಾಯಣಪುರ, ಉಪನ್ಯಾಸಕ ಎಸ್.ಸುದೀಪ್‌ಕುಮಾರ್, ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು, ತಗ್ಗಹಳ್ಳಿ ವೆಂಕಟೇಶ್, ನಿರ್ದೇಶಕ ಕೋಣನಹಳ್ಳಿ ಜಯರಾಮು ಇದ್ದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಚಲುವರಾಜು(ಸಿ.ನಾಗರಾಜು ಜನಪದ ಕಲಾವಿದ), ಪಿ.ಸತ್ಯನಾರಾಯಣ(ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ), ಪುಟ್ಟಮ್ಮ(ಗುಣಸಾಗರಿ ಸಿ.ನಿಂಗರಾಜು ಕಲಾವಿದೆ), ಸಿದ್ದಮ್ಮ ಅವರಿಗೆ ಚನ್ನಮ್ಮ ಕರಿಯಪ್ಪ ಕಲಾವಿದೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net