

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ವಿವಿಧ ಚಟುವಟಿಕೆಯೊಂದಿಗೆ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ 68 ನೇ ಪುಣ್ಯಸ್ಮರಣೆ ಆಚರಿಸಲಾಯಿತು.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿನ ಜೈ ಭೀಮ್ ಮೆಮೋರಿಯಲ್ ಪದವಿ ಕಾಲೇಜು ಹಾಸ್ಟೆಲ್ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಕೈಗೊಂಡಿದ್ದ ಕಾರ್ಯಕ್ರಮಕ್ಕೂ ಮೊದಲು ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪುಷ್ಪ ನಮನ ಸಲ್ಲಿಸಿದರು.
ಭಾರತೀಯ ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ ಮತ್ತು ಸ್ವಾಭಿಮಾನಕ್ಕಾಗಿ ಹೋರಾಡಿದ ಪ್ರಖರ ಪಾಂಡಿತ್ಯ, ಶ್ರೇಷ್ಠ ಸಾಮಾಜಿಕ ವಿಜ್ಞಾನಿ ಅಂಬೇಡ್ಕರ್ ಎಂದು ಬಣ್ಣಿಸಿದರು.
ಸಂವಿಧಾನ ಶಿಲ್ಪಿಯ ತತ್ವ ಚಿಂತನೆಗಳ ಬೆಳಕಿನಲ್ಲಿ ಭಾರತವು ಸಮರ್ಥವಾಗಿ ಮುಂದುವರೆಯುತ್ತಿದೆ. ದೇಶದ ಪ್ರಜೆಗಳ ಏಳ್ಗೆಯಲ್ಲಿ ಬೀರುತ್ತಿರುವ ಪ್ರಭಾವ ಮಹತ್ವದ್ದಾಗಿದೆ ಎಂದರು.
ಯುವ ಜನರು ಗಂಭೀರವಾಗಿ ಅಧ್ಯಯನದ ಜತೆಗೆ ದೇಶವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೋಡಿರಂಗಪ್ಪ ಮಾತನಾಡಿ, ಶೋಷಿತ, ಅಸಹಾಯಕ ಮತ್ತು ದುರ್ಬಲ ವರ್ಗಗಳನ್ನು ಅಸಮಾನತೆಯ ವ್ಯವಸ್ಥೆಯಿಂದ ಬಿಡುಗಡೆಗೊಳಿಸಲು, ಮಹಿಳೆಯರ ಸ್ವಾತಂತ್ರ್ಯ, ಸ್ವಾಭಿಮಾನದ ಬದುಕಿಗಾಗಿ ಹೋರಾಟದ ಮೂಲಕ ಸಂಚಲನ ಮೂಡಿಸಿದ ತಾಯಿ ಮನಸ್ಸಿನ ನಾಯಕ ಅಂಬೇಡ್ಕರ್ ಎಂದರು.
ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ನಗರ ಸಭೆಯ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ನಾಗರಾಜು, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್ ಅಶ್ವಿನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ತೇಜಾನಂದರೆಡ್ಡಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಷಾದ್ರಿ, ಮುಖಂಡರಾದ ಆನಂದ್, ಛಲಪತಿ, ನಟರಾಜ್, ರತ್ನಮ್ಮ ಮತ್ತು ಗಾನ ಅಶ್ವಥ್ ಮತ್ತಿತರರು ಇದ್ದರು.