ಅ.೨೨ ರಂದು ಮಹಿಳಾ ದಸರಾದಲ್ಲಿ ವೈವಿಧ್ಯಮಯ ಸ್ಪರ್ಧೆ

15adarshkdga2
Published on

ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅ.೨೨ ರಂದು ಭಾನುವಾರ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿರುವ ಮಹಿಳಾ ದಸರಾದ ವಿವಿಧ ಸ್ಪರ್ಧೆಗಳಿಗೆ ಸ್ಥಳದಲ್ಲಿಯೇ ಹೆಸರು ನೋಂದಾಯಿಸಬಹುದಾಗಿದೆ ಎಂದು ಮಹಿಳಾ ದಸರಾ ಸಮಿತಿ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅ.೨೨ ರಂದು ಬೆಳಗ್ಗೆ ೧೦ ಗಂಟೆಯಿಂದಲೇ ನಗರದ ಗಾಂಧಿ ಮೈದಾನದಲ್ಲಿ ೮ನೇ ವರ್ಷದ ಮಹಿಳಾ ದಸರಾವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ವಿವಿಧ ಸ್ಪರ್ಧೆಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ.


ಎಥ್ ನಿಕ್ ಫ್ಯಾಷನ್ ಶೋ: ೨೦ ರಿಂದ ೩೦ ವಯೋಮಾನದವರಿಗೆ ಹಾಗೂ ೩೧ ರಿಂದ ೫೫ ವರ್ಷ ವಯೋಮಿತಿಯ ಮಹಿಳೆಯರಿಗೆ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ(ಕರ್ನಾಟಕದ ವಿವಿಧ ಉಡುಗೆಗಳಿಗೆ ಆದ್ಯತೆ). ಉಡುಗೆ, ಆಭರಣ, ವಸ್ತ್ರ, ನಡುಗೆ, ಕೇಶ ವಿನ್ಯಾಸ, ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಈ ಸ್ಪರ್ಧೆ ವೈಯಕ್ತಿಕ ವಿಭಾಗದಲ್ಲಿ ಆಯೋಜಿಸಲ್ಪಟ್ಟಿದೆ.


ಗಾರ್ಭಾ ನೃತ್ಯ ಸ್ಪರ್ಧೆ, ೧೦೦ ಮೀಟರ್ ಓಟದ ಸ್ಪರ್ಧೆ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ(ವೈಯಕ್ತಿಕ) ಹಾಗೂ ಹಗ್ಗ ಜಗ್ಗಾಟ. ೪೦ ರಿಂದ ೫೦ ವರ್ಷ ವಯೋಮಿತಿ ಮಹಿಳೆಯರಿಗೆ ೧೦೦ ಮೀಟರ್ ಓಟದ ಸ್ಪರ್ಧೆ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯುವುದು, ಬಕೆಟ್‌ಗೆ ಚೆಂಡನ್ನು ಹಾಕುವ ಸ್ಪರ್ಧೆ ನಡೆಯಲಿದೆ. ೫೦ ರಿಂದ ೬೦ ವರ್ಷ ವಯೋಮಿತಿ ಮಹಿಳೆಯರಿಗೆ ಬಕೆಟ್‌ಗೆ ಚೆಂಡು ಹಾಕುವ ಸ್ಪರ್ಧೆ, ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವುದು, ಕೋಲಿಗೆ ರಿಂಗ್ ಹಾಕುವುದು ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದ್ದಾರೆ.


೬೦ ರಿಂದ ೭೦ ವರ್ಷ ವಯೋಮಿತಿ ಮಹಿಳೆಯರಿಗೆ ನಿಧಾನವಾಗಿ ನಡೆಯುವುದು, ಸೂಜಿಗೆ ನೂಲನ್ನು ಹಾಕುವುದು, ಬಾಂಬ್ ಇನ್ ಸಿಟಿ, ೭೦ ರಿಂದ ೮೦ ವರ್ಷ ವಯೋಮಿತಿ ಮಹಿಳೆಯರಿಗೆ ಸೂಜಿಗೆ ನೂಲು ಹಾಕುವುದು, ಚೆಂಡನ್ನು ವರ್ಗಾಯಿಸುವುದು, ನಿಧಾನವಾಗಿ ನಡೆಯುವ ಸ್ಪರ್ಧೆ ನಡೆಯಲಿದೆ. ವೇದಿಕೆ ಮೇಲೆ ನಡೆಯುವ ಸ್ಪರ್ಧೆ: ಎಲ್ಲಾ ವಯಸ್ಸಿನ ಮಹಿಳೆಯರಿಗಾಗಿ ಮೆಹೆಂದಿ ಹಾಕುವುದು, ಸೀರೆಯ ನಿಖರವಾದ ಬೆಲೆ ಹೇಳುವುದು, ಮತ್ತು ವಾಲಗ ಕುಣಿತ ಸ್ಪರ್ಧೆ ನಡೆಯಲಿದೆ.


ಸ್ಪರ್ಧೆಗಳಿಗೆ ಅ.೨೨ ರಂದು ಭಾನುವಾರ ಬೆಳಗ್ಗೆ ೧೦ ಗಂಟೆಯೊಳಗಾಗಿ ಮಡಿಕೇರಿ ಗಾಂಧಿ ಮೈದಾನದ ಸ್ಪರ್ಧಾ ಸ್ಥಳದಲ್ಲಿಯೇ ಸ್ಪರ್ಧಿಗಳು ಹೆಸರನ್ನು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೯೫೩೫೮೯೮೩೫೨, ೮೩೧೦೮೯೧೨೬೯ ಸಂಪರ್ಕಿಸಬಹುದು ಎಂದು ಕುಡೆಕಲ್ ಸವಿತಾ ಸಂತೋಷ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net