

ಸಿದ್ದಾಪುರ: ಪಟ್ಟಣದ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಲಕ್ಷ್ಮಿ ನಾರಾಯಣ ದೇವರ 32ನೇ ವಾರ್ಷಿಕ ವರ್ಧತಿ ಉತ್ಸವ ಬುಧವಾರ ವಿವಿಧ ಧಾರ್ವಿುಕ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ಗಣ ಹೋಮ, ನವಗ್ರಹ ಹೋಮ, ಪವಮಾನ ಹವನ, ಕುಂಭಾಭಿಷೇಕ ಮುಂತಾದ ಧಾರ್ವಿುಕ ಕಾರ್ಯಕ್ರಮಗಳು ಹಾಗೂ ರಾಜರಾಜೇಶ್ವರಿ ಮಹಿಳಾ ಮಂಡಳಿಯಿಂದ ಲಲಿತ ಸಹಸ್ರನಾಮ ಪಠಣ, ಭಜನೆ ನಡೆಯಿತು.
ವೇದಮೂರ್ತಿ ಆನಂದ ಭಟ್ ಸಿರಸಿ, ವೇದಮೂರ್ತಿ ನಾಗರಾಜ ಎಸ್. ಭಟ್ ಹಾಗೂ ಸಹಾಯಕ ಪುರೋಹಿತ ವೆಂಕಟೇಶ ಎಸ್. ಭಟ್ ಮಂಜುಗುಣಿ ನೇತೃತ್ವದಲ್ಲಿ ದೈವಜ್ಞ ಸಮಾಜದ ಅಧ್ಯಕ್ಷ ಶಾಂತಾರಾಮ ವಿ. ಶೇಟ್ ದಂಪತಿ ಪೂಜಾ ಕಾರ್ಯಕ್ರಮ ನೆರವೇರಿಸಿದರು. ನಂತರ ಈ ವರ್ಷದ 12 ತಿಂಗಳು ಪೂಜಾ ಸೇವೆ ಸಲ್ಲಿಸಿದವರಿಗೆ ಪ್ರಸಾದ ನೀಡಿ ಗೌರವಿಸಲಾಯಿತು. ಮಹಾ ಅನ್ನ ಸಂತರ್ಪಣೆ ಹಾಗೂ ಪಂಚ ವಾದ್ಯದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು. ಪುರೋಹಿತ ವರ್ಗದವರನ್ನು ಸಮಾಜದಿಂದ ಗೌರವಿಸಲಾಯಿತು. ದೈವಜ್ಞ ಬ್ರಾಹ್ಮಣ ಸಮಾಜ ಅಭಿವೃದ್ಧಿ ಮಂಡಳಿ, ದೈವಜ್ಞ ಯುವಕ ಸಂಘ, ರಾಜರಾಜೇಶ್ವರಿ ಮಹಿಳಾ ಮಂಡಳಿ, ಸರಾಫ ಸಂಘ, ವಿದ್ಯಾ ಪ್ರೋತ್ಸಾಹಕ ನಿಧಿ ಸಮಿತಿ, ದೈವಜ್ಞ ಸ್ಪೋರ್ಟ್ಸ್ ಕ್ಲಬ್ನ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾಜದ ಹಿರಿಯರು ಪಾಲ್ಗೊಂಡಿದ್ದರು.